ನ್ಯೂಸ್ ನಾಟೌಟ್: ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡ ಬಳಿಕ ಬಿಜೆಪಿಯ ಹಲವು ಹಿರಿಯ ನಾಯಕರು ಅಸಮಾಧಾನ ಹೊರಹಾಕಿದ್ದರು. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಸಿಟಿ ರವಿ ಹೈಕಮಾಂಡ್ ನಿರ್ಧಾರದ ಕುರಿತು ಬೇಸರ ವ್ಯಕ್ತಪಡಿಸಿದ್ದರು. ವಿಜಯೇಂದ್ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಾವು ಹೋಗುವುದಿಲ್ಲವೆಂದು ಸಿಟಿ ರವಿ ಹೇಳಿದ್ದು ಈಗ ಎಲ್ಲಡೆ ವೈರಲ್ ಆಗಿದೆ.
ಸೋಮವಾರ ರಾತ್ರಿ ವಿಜಯೇಂದ್ರ ಸಿಟಿ ರವಿಯನ್ನು ಭೇಟಿಯಾಗಿ ಸಹಕಾರ ಕೋರಿದ್ದಾರೆ ಎನ್ನಲಾಗಿದೆ. ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಸಿಟಿ ರವಿ ಅಭಿನಂದಿಸಿರುವ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿವೆ.
ರಾಜ್ಯಾಧ್ಯಕ್ಷ ಸ್ಥಾನ ತಪ್ಪಿದ ಅಸಮಾಧಾನ ಮತ್ತು ಕೋಪವಿದ್ದರೂ ವಿಜಯೇಂದ್ರನನ್ನು ಬಾಚಿ ತಬ್ಬಿರುವ ಸಿಟಿ ರವಿ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಸಮಾಧಾನವಿದ್ದರೆ ರಾಜಕೀಯ ತ್ಯಜಿಸುತ್ತೇನೆ ಆದರೆ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ನವೆಂಬರ್ 15 ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗುವಂತೆ ವಿಜಯೇಂದ್ರ ರವಿಗೆ ಆಹ್ವಾನ ನೀಡಿದ್ದಾರೆ. ಆದರೆ, ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ರವಿ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದಾರೆ. ಸಿಟಿ ರವಿ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.