ನ್ಯೂಸ್ ನಾಟೌಟ್: ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗವಾದ ಕುಟ್ಟಕ್ಕೆ ಸಮೀಪವಿರುವ ಕೇರಳದ ಐಯಮ್ಮುನ್ ಎಂಬ ಸ್ಥಳದಲ್ಲಿ ನಕ್ಸಲರ ಮತ್ತು ಕೇರಳ ನಕ್ಸಲ್ ನಿಗ್ರಹ ಪಡೆಯ ನಡುವೆ ತೀವ್ರತರವಾದ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ನಕ್ಸಲರೂ ಪರಾರಿಯಾಗಿದ್ದಾರೆ.
ಕೇರಳದ ಐಯಮ್ಮುನ್ ಎಂಬಲ್ಲಿ ಕಳೆದ ಕೆಲವು ದಿನಗಳಿಂದ 9 ಮಂದಿಯ ನಕ್ಸಲ್ ತಂಡ ಶಿಬಿರ ಹಾಕಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ನಡೆಸಿ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ ನಕ್ಸಲರ ತಂಡವೂ ತೀವ್ರವಾದ ಗುಂಡಿನ ಚಕಮಕಿ ನಡೆಸಿದೆ. ಸ್ಥಳದಲ್ಲಿ ಎರಡು ರೈಫಲ್ಸ್ ಸಿಕ್ಕಿದ್ದು, ರಕ್ತದ ಕಲೆ ಪತ್ತೆಯಾಗಿವೆ. ಹೀಗಾಗಿ ಗುಂಡಿನ ಚಕಮಕಿಯಲ್ಲಿ ನಕ್ಸಲರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರು ನಕ್ಸಲರ ಕಬಿನಿ ಎಂಬ ತಂಡದವರಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಗಾಯಗೊಂಡಿರುವ ನಕ್ಸಲರು ಚಿಕಿತ್ಸೆ ಪಡೆಯಲು ಕರ್ನಾಟಕಕ್ಕೆ ನುಸುಳುವ ಸಾಧ್ಯತೆಯಿದೆ. ಗಡಿ ಭಾಗದ ಎಲ್ಲ ಔಷಧ ಅಂಗಡಿಗಳ ಮೇಲೆ ನಿಗಾ ಇರಿಸಲಾಗಿದೆ. ರಾಜ್ಯ ನಕ್ಸಲ್ ನಿಗ್ರಹ ಪಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಗಡಿಭಾಗದಲ್ಲಿ ನಕ್ಸಲರೊಂದಿಗೆ ಭಾರಿ ಗುಂಡಿನ ಚಕಮಕಿ ನಡೆದ ಬೆನ್ನಲ್ಲೇ ರಾಜ್ಯ ನಕ್ಸಲ್ ನಿಗ್ರಹ ಪಡೆಯ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ.ಜಿಲ್ಲಾ ಪೊಲೀಸರು ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಹಾಕಿಕೊಂಡು ತಪಾಸಣೆ ತೀವ್ರಗೊಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಗಡಿಪ್ರದೇಶಕ್ಕೆ ಭೇಟಿ ನೀಡಿ ಮುಂಜಾಗ್ರತೆ ಕ್ರಮವನ್ನು ಬಿಗಿಗೊಳಿಸಿದ್ದಾರೆ.