ನ್ಯೂಸ್ನಾಟೌಟ್: ಮುಸ್ಲಿಂ ಕುಟುಂಬವು ದೀಪಾವಳಿ ಹಬ್ಬದ ಮೊದಲ ದಿನದಂದು ಕಾಳಿ ಪೂಜೆ ಮಾಡುವ ಘಟನೆ ತ್ರಿಪುರಾದ ಅಗರ್ತಲಾ ನಗರದ ಬಳಿ ಅಮ್ತಾಲಿ ಅನ್ನೋ ಪುಟ್ಟ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯ ರಬ್ಬರ್ ಮಂಡಳಿಯ ಸದಸ್ಯರಾದ ಕಾಶೆಮ್ ಮಿಯಾ ಎಂಬುವರು ಇಸ್ಲಾಂ ಧರ್ಮದವರಾದರೂ ಕೂಡಾ ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಕಾಶೆಮ್ ಮಿಯಾ ಮನೆ ಬಳಿಯೇ ನಡೆದ ಈ ಕಾರ್ಯಕ್ರಮದಲ್ಲಿ ಈ ವರ್ಷ ಬರೋಬ್ಬರಿ 1,500 ಮಂದಿ ಸೇರಿದ್ದರು. ಎಲ್ಲರೂ ಹಿಂದೂ ಧರ್ಮೀಯರೇ ಆಗಿದ್ದರು ಅನ್ನೋದು ವಿಶೇಷ. ಎಲ್ಲರಿಗೂ ವಿಶೇಷ ಭೋಜನ ವ್ಯವಸ್ಥೆಯನ್ನೂ ಕಾಶೆಮ್ ಮಿಯಾ ಮಾಡಿದ್ದರು. ವರ್ಷದಿಂದ ವರ್ಷಕ್ಕೆ ದೀಪಾವಳಿ ಹಬ್ಬದ ದಿನ ಕಾಶೆಮ್ ಮಿಯಾ ಅವರ ಮನೆಯಲ್ಲಿ ನಡೆಯುವ ಕಾಳಿ ಪೂಜೆ ಬರುವ ಭಕ್ತರ ಸಂಖ್ಯೆ ಕೂಡಾ ಹೆಚ್ಚುತ್ತಲೇ ಇದೆ ಎಂದು ವರದಿ ತಿಳಿಸಿದೆ.
ಇನ್ನು ಈ ಪೂಜೆಯಲ್ಲಿ ಮತ್ತೊಂದು ವಿಶೇಷವಿದೆ. ಇಂಥಾದ್ದೊಂದು ಪೂಜಾ ಕಾರ್ಯಕ್ರಮ ಆಯೋಜಿಸುವಾಗ ಹಿಂದೂ ಸಂಪ್ರದಾಯ ಹಾಗೂ ಪದ್ದತಿಗಳಂತೆ ಪೂಜೆ ಪುನಸ್ಕಾರ ನಡೆಸಿ ಕೊಡುವ ಅರ್ಚಕರನ್ನು ನೇಮಿಸಿಕೊಳ್ಳುವ ಪರಿಪಾಠವನ್ನೂ ಕಾಶೆಮ್ ಮಿಯಾ ಪಾಲಿಸೋದಿಲ್ಲ! ತಾವೇ ಖುದ್ದಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಮಾಡಿ ಪೂಜೆ ಸಲ್ಲಿಸುತ್ತಾರೆ ಎನ್ನಲಾಗಿದೆ.
ಕಳೆದ 10 ವರ್ಷಗಳಿಂದ ಕಾಶೆಮ್ ಮಿಯಾ ಮನೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 2014ರಲ್ಲಿ ಕಾಶೆಮ್ ಮಿಯಾ ಕನಸಿನಲ್ಲಿ ಕಾಳಿ ಮಾತೆ ಕಾಣಿಸಿಕೊಂಡಿದ್ದರಂತೆ. ದೀಪಾವಳಿ ದಿನ ಪೂಜೆ ಸಲ್ಲಿಸುವಂತೆ ಮಾತೆ ಸೂಚನೆ ನೀಡಿದ್ದರು. ತನ್ನ ಕನಸಿನ ಬಗ್ಗೆ ಕಾಶೆಮ್ ಮಿಯಾ ಕುಟುಂಬಸ್ಥರಿಗೆ ಹೇಳಿದಾಗ ಅವರು ಒಪ್ಪಲೇ ಇಲ್ಲ. ಮುಸ್ಲಿಂ ಧರ್ಮೀಯರಾದ ನಾವು ಹಿಂದೂ ದೇವತೆಯನ್ನು ಅದರಲ್ಲೂ ಮೂರ್ತಿ ಪೂಜೆ ಮಾಡೋದು ಹೇಗೆ ಎಂದು ಪ್ರಶ್ನಿಸಿದ್ದರಂತೆ. ಈ ವೇಳೆ ಕಾಶೆಮ್ ಮಿಯಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ನಂತರ ಮಗನ ಆರೋಗ್ಯ ಸುಧಾರಣೆಗಾಗಿ ನಾವು ಕಾಳಿ ಪೂಜೆ ಮಾಡಲು ಒಪ್ಪಿಕೊಂಡೆವು ಎನ್ನುತ್ತಾರೆ, ಕಾಶೆಮ್ ಮಿಯಾ ತಂದೆ ಮೊಹಮ್ಮದ್. ಇನ್ನು ಕಾಶೆಮ್ ಮಿಯಾ ವರ್ಷಕ್ಕೆ ಒಂದೇ ಬಾರಿ ದೀಪಾವಳಿ ದಿನ ಮಾತ್ರ ಕಾಳಿ ಮಾತೆಯ ಆರಾಧನೆ ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ಎಂದಿನಂತೆ ತಮ್ಮ ಕುಟುಂಬಸ್ಥರ ಜೊತೆ ಇಸ್ಲಾಂ ಧರ್ಮದ ಆಚರಣೆಗಳನ್ನು ಪಾಲಿಸುತ್ತಾರೆ. ಪ್ರತಿ ದಿನ 5 ಬಾರಿ ತಪ್ಪದೇ ನಮಾಜ್ ಕೂಡಾ ಮಾಡುತ್ತಾರೆ. ಇದಲ್ಲದೆ ಮುಸ್ಲಿಮರ ಎಲ್ಲಾ ಜೀವನ ಶೈಲಿ, ವಿಧಿ ವಿಧಾನ ಹಾಗೂ ಸಂಪ್ರದಾಯಗಳನ್ನೂ ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಾರೆ ಎನ್ನಲಾಗಿದೆ.