ನ್ಯೂಸ್ ನಾಟೌಟ್: ತಾಯಿ ಮೂವರು ಮಕ್ಕಳು ಸೇರಿದಂತೆ ನಾಲ್ವರ ಕೊಲೆ ಪ್ರಕರಣ ಉಡುಪಿ ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಈ ಕೊಲೆಯ ಹಿಂದಿನ ಆರೋಪಿ ಯಾರು ಅನ್ನುವುದು ಭಾರಿ ಕುತೂಹಲ ಕೆರಳಿಸಿದೆ. ಈ ನಡುವೆ ಆರೋಪಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಪೊಲೀಸರು ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದು ಹಂತಕನ ಹೆಡೆಮುರಿ ಕಟ್ಟುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಆಟೋ ಚಾಲಕ ಶ್ಯಾಮ್ ನೀಡಿರುವ ಹೇಳಿಕೆ ಪ್ರಕರಣಕ್ಕೆ ಹೊಸ ದಾರಿಯನ್ನೇ ನೀಡಿದೆ ಎಂದು ತಿಳಿದು ಬಂದಿದೆ.
ಕೊಲೆ ಆರೋಪಿ ಭೀಕರವಾಗಿ ತಾಯಿ ಹಾಗೂ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಈತ ಸಂತೆಕಟ್ಟೆಯಿಂದ ಶ್ಯಾಮ್ ಅನ್ನುವ ವ್ಯಕ್ತಿಯ ಆಟೋ ಏರಿದ್ದಾನೆ. ನೇರವಾಗಿ ಕೊಲೆಯಾಗಿರುವ ಹಸೀನಾ ಅವರ ಮನೆಗೆ ಬಂದಿದ್ದಾನೆ. ಈ ಬಗ್ಗೆ ಆಟೋ ಚಾಲಕ ಪ್ರತಿಕ್ರಿಯಿಸಿದ್ದಿಷ್ಟು, “ಇಂದು ಬೆಳಗ್ಗೆ 8:30ರಿಂದ 9 ಗಂಟೆಯ ನಡುವೆ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ಬಂದ. ಕ್ವಿನ್ಸ್ ರಸ್ತೆಯಲ್ಲಿ ನನ್ನ ರಿಕ್ಷಾ ಏರಿದ್ದಾನೆ. ನೇಜಾರು ತೃಪ್ತಿ ಲೇಔಟ್ ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾನೆ. ಅದರಂತೆ ಆತನನ್ನು ತೃಪ್ತಿ ಲೇಔಟ್ ನ ಹಸೀನಾ ಅವರ ಮನೆ ಎದುರು ಬಿಟ್ಟಿದ್ದೇನೆ. ಹಾಗೆ ಆತನನ್ನು ಬಿಟ್ಟು ನಾನು ನನ್ನ ಪಾಡಿಗೆ ವಾಪಸ್ ಆಟೋ ನಿಲ್ದಾಣಕ್ಕೆ ಬಂದಿದ್ದೇನೆ.
“ಕೊಲೆ ನಡೆದಿರುವ ಮನೆಗೆ ನಾನು ಬಿಟ್ಟ ಬಳಿಕ 15 ನಿಮಿಷಗಳ ಅಂತರದಲ್ಲಿ ಆತ ಮತ್ತೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದಿದ್ದಾನೆ, ಅಲ್ಲಿ ಕ್ಯೂನಲ್ಲಿದ್ದ ಬೇರೊಂದು ರಿಕ್ಷಾ ಏರಿದ್ದಾನೆ. ಈ ವೇಳೆ ಆತನನ್ನು ಗುರುತಿಸಿದ ನಾನು ಇಷ್ಟು ಬೇಗ ಬರಲಿಕ್ಕಿದ್ದರೆ ನಾನೇ ಕಾಯುತ್ತಿದ್ದೆ ಎಂದು ಹೇಳಿದೆ. ಅದಕ್ಕೆ ಆತ ಪರವಾಗಿಲ್ಲ ಎಂದ. ಅಲ್ಲದೆ ವೇಗವಾಗಿ ಹೋಗುವಂತೆ ಆ ರಿಕ್ಷಾ ಚಾಲಕನಿಗೆ ಸೂಚಿಸಿದ. ಆತನಿಗೆ ಸುಮಾರು 45 ವರ್ಷ ವಯಸ್ಸಾಗಿದೆ. ಆ ವ್ಯಕ್ತಿ ಕನ್ನಡ ಮಾತನಾಡುತ್ತಿದ್ದ. ಮುಖಕ್ಕೆ ಮಾಸ್ಕ್ ಧರಿಸಿದ್ದ. ಆತನ ಕಣ್ಣಿನ ಭಾಗ ಮಾತ್ರ ಕಾಣಿಸುತ್ತಿತ್ತು. ಬೋಳು ತಲೆಯ ಆ ವ್ಯಕ್ತಿ ಬಿಳಿ ಮೈಬಣ್ಣ ಹೊಂದಿದ್ದ ಎಂದು ಶ್ಯಾಮ್ ತಿಳಿಸಿದ್ದಾರೆ.