ನ್ಯೂಸ್ ನಾಟೌಟ್: ಸುಳ್ಯದ ಅಮರಶಿಲ್ಪಿ ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗ ಹಾಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಎಂ.ಬಿ.ಫೌಂಡೇಶನ್ನಲ್ಲಿರುವ ಸಾಂದೀಪನಿ ವಿಶೇಷ ಚೇತನ ಮಕ್ಕಳ ಜೊತೆ ಗುರುವಾರ (ನ.9) ಆಚರಿಸಿಕೊಂಡರು.
ಅಕ್ಷಯ್ ಕೆ.ಸಿಯವರದ್ದು ಹೆಚ್ಚು ಆಡಂಬರದ ಆಚರಣೆಗಳಿಗೆ ಒಳಪಡದ ವ್ಯಕ್ತಿತ್ವ. ಎಲ್ಲರೊಂದಿಗೂ ಒಂದಾಗಿ ಬೆರೆಯುವ ಗುಣವುಳ್ಳವರು. ಮನೆಯವರಿರಲಿ, ಸಂಸ್ಥೆಯ ಸಿಬ್ಬಂದಿಗಳಿರಲಿ ಅತ್ಯಂತ ಪ್ರೀತಿಯಿಂದ ಬೆರೆಯುವವರು. ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು. ಕೆವಿಜಿ ಕ್ಯಾಂಪಸ್ ನಲ್ಲಿರುವ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ, ಸಿಬ್ಬಂದಿಗೆ, ಅಭಿಮಾನಿಗಳಿಗೆ ತನ್ನ ಹುಟ್ಟು ಹಬ್ಬದ ಹೆಸರಿನಲ್ಲಿ ಅನಗತ್ಯ ಕೇಕ್ ಕತ್ತರಿಸಿ ಹಣ ಪೋಲು ಮಾಡದಂತೆ ಅಕ್ಷಯ್ ಕೆ.ಸಿಯವರು ಹುಟ್ಟು ಹಬ್ಬಕ್ಕೂ ಮುನ್ನವೇ ಮನವಿ ಮಾಡಿಕೊಂಡಿದ್ದರು. ಮಾತ್ರವಲ್ಲ ಕೇಕ್ ತರುವ ಹಣವನ್ನು ಬಡವರಿಗೆ ಅಥವಾ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೀಡಿ ಎಂದು ಸಲಹೆ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಕೆವಿಜಿ ಕ್ಯಾಂಪಸ್ ನಲ್ಲಿ ಹಲವಾರು ಮಂದಿ ಕೇಕ್ ಗೆಂದು ಸಂಗ್ರಹಿಸಿದ್ದ ಹಣವನ್ನು ಸಾಂದೀಪನಿ ವಿಶೇಷ ಚೇತನ ಮಕ್ಕಳಿಗೆ ಶುಕ್ರವಾರ ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರದ ಕಾರ್ಯಕ್ರಮದಲ್ಲಿ ಸ್ವತಃ ಅಕ್ಷಯ್ ಕೆ.ಸಿಯವರು ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸಿ ಸಂತೋಷದಲ್ಲಿ ಪಾಲ್ಗೊಂಡರು. ತಮ್ಮ ಕೈನಿಂದ ಆದಷ್ಟು ಧನ ಸಹಾಯವನ್ನೂ ಹುಟ್ಟು ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳಿಗೆ ನೀಡುವುದಾಗಿ ತಿಳಿಸಿದರು. ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟು ಹಬ್ಬದ ದಿನದಂದು ಸಮಾಜ ಮುಖಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕಿದೆ ಎಂದು ಅಕ್ಷಯ್ ತಿಳಿಸಿದ್ದಾರೆ. ಈ ವೇಳೆ ಅಕ್ಷಯ್ ಅವರ ತಾಯಿ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ನಿರ್ದೇಶಕಿ ಹಾಗೂ ಅಕ್ಷಯ್ ಕೆ.ಸಿಯವರ ಸಹೋದರಿ ಆಗಿರುವ ಡಾ | ಐಶ್ವರ್ಯ ಗೌತಮ್ ಸೇರಿದಂತೆ ಸ್ನೇಹಿತ ವರ್ಗ ಉಪಸ್ಥಿತರಿದ್ದರು. ವಿಶೇಷ ಚೇತನ ಮಕ್ಕಳಿಗಾಗಿ ಜಾದೂಗಾರ ಪಾಂಗಾಳ ಗೋಪಾಲಕೃಷ್ಣ ಶೆಣೈ ಅವರಿಂದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ಸಾಂದೀಪ್ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ, ಪುಷ್ಪಾ ರಾಧಾಕೃಷ್ಣ, ಸಾಯಿರಾಂ ಮತ್ತಿತರರು ಉಪಸ್ಥಿತರಿದ್ದರು.