ನ್ಯೂಸ್ ನಾಟೌಟ್ : ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಶಕ್ತಿಹರಣ ಆಪರೇಷನ್ ಆಯೋಜಿಸಲಾಗಿತ್ತು, ತನಗೆ ಟೀ ಕೊಡಲಿಲ್ಲ ಎಂದು ಕೋಪಗೊಂಡ ವೈದ್ಯರೊಬ್ಬರು ಸರ್ಜರಿಯನ್ನು ಅರ್ಧದಲ್ಲಿಯೇ ಬಿಟ್ಟು ಆಪರೇಷನ್ ಥಿಯೇಟರ್ನಿಂದ ಹೊರ ನಡೆದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯನ ವಿರುದ್ಧ ಪ್ರಕರಣ ದಾಖಲಿಸುವಂತೆ ಆಕ್ರೋಶ ವ್ಯಕ್ತವಾಗಿದೆ. ನಾಗಪುರದ ಮೌದಾ ತಾಲೂಕಿನ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ನ. 3ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆ ದಿನದಂದು ಎಂಟು ಮಂದಿ ಮಹಿಳೆಯರು ಕುಟುಂಬ ಯೋಜನೆ ಸರ್ಜರಿಗೆ (ಟ್ಯೂಬೆಕ್ಟಮಿ) ಒಳಗಾಗಬೇಕಿತ್ತು. ನಾಲ್ವರು ಮಹಿಳೆಯರಿಗೆ ಟ್ಯೂಬೆಕ್ಟಮಿ(tubectomy) ಸರ್ಜರಿ ಪೂರ್ಣಗೊಳಿಸಿದ ವೈದ್ಯ ಡಾ ತೇಜರಂಗ್ ಭಲಾವಿ, ಇನ್ನು ಉಳಿದ ನಾಲ್ಕು ಮಹಿಳೆಯರಿಗೆ ಅನಸ್ತೇಷಿಯಾ ನೀಡಿದ್ದರು.
ಆಯಾಸವಾಗಿದ್ದರಿಂದ ಟೀ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದ್ದರು. ಎಷ್ಟು ಹೊತ್ತು ಕಳೆದರೂ ಟೀ ಬರದೇ ಇದ್ದ ಕಾರಣ, ಇದರಿಂದ ಕೋಪಗೊಂಡ ವೈದ್ಯ, ಉಳಿದ ನಾಲ್ಕು ಮಹಿಳೆಯರ ಸರ್ಜರಿ ಪೂರ್ಣಗೊಳಿಸದೆ ಆಪರೇಷನ್ ಥಿಯೇಟರ್ನಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ.
ಡಾ. ತೇಜರಂಗ್ ಭಲಾವಿ ಅಲ್ಲಿಂದ ಹೊರಟು ಹೋದ ನಂತರ ಆಸ್ಪತ್ರೆ ಆಡಳಿತ ಮಂಡಳಿ ಜಿಲ್ಲಾ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿದೆ. ಅರವಳಿಕೆ ನೀಡಿ ಮಲಗಿಸಿದ್ದ ಬಾಕಿ ಮಹಿಳೆಯರ ಸರ್ಜರಿ ನಡೆಸಲು ಬೇರೊಬ್ಬ ವೈದ್ಯರನ್ನು ಕಳುಹಿಸಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತ ಆದೇಶ ನೀಡಿದೆ.
ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ನಾಗಪುರ ಜಿಲ್ಲಾ ಪರಿಷದ್ ಸಿಇಒ ಸೌಮ್ಯಾ ಶರ್ಮಾ ತಿಳಿಸಿದ್ದಾರೆ. ಸಮಿತಿ ನೀಡುವ ವರದಿ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.