ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಜತೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಹಮಾಸ್ ಮೇಲೆ ಯುದ್ಧ ಸಾರಿರುವ ಇಸ್ರೇಲ್ ಪಡೆಗಳು ಗಾಜಾದಲ್ಲಿ ನಡೆಸುತ್ತಿರುವ ದಾಳಿಯನ್ನು ತಡೆಯಲು ಭಾರತ ತನ್ನ ‘ಎಲ್ಲಾ ಸಾಮರ್ಥ್ಯಗಳನ್ನು’ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇಬ್ಬರು ನಾಯಕರ ನಡುವಿನ ಮಾತುಕತೆ ಕುರಿತು ಇರಾನ್ ಹೇಳಿಕೆ ಬಿಡುಗಡೆ ಮಾಡಿದೆ.
“ಇಂದು ಭಾರತವು ಗಾಜಾದಲ್ಲಿನ ಶೋಷಿತ ಜನರ ವಿರುದ್ಧ ನಡೆಯುತ್ತಿರುವ ಜಿಯೋನಿಸ್ಟ್ ಅಪರಾಧಗಳನ್ನು ಅಂತ್ಯಗೊಳಿಸಲು ಭಾರತವು ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಲಿದೆ ಎಂದು ನಿರೀಕ್ಷಿಸಲಾಗಿದೆ” ಎಂಬುದಾಗಿ ಇರಾನ್ ಹೇಳಿಕೆ ನೀಡಿದೆ.
ತಕ್ಷಣದ ಕದನ ವಿರಾಮ ಘೋಷಣೆ ಹಾಗೂ ಗಾಜಾದಲ್ಲಿನ ಸಂತ್ರಸ್ತ ಜನರಿಗೆ ನೆರವು ಒದಗಿಸುವುದು ಮತ್ತು ತಡೆ ತೆರವುಗೊಳಿಸುವ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ಟೆಹರಾನ್ ಬೆಂಬಲಿಸಲಿದೆ ಎಂದು ಇರಾನ್ ಅಧ್ಯಕ್ಷ ರೈಸಿ ಹೇಳಿದ್ದಾರೆ.
ಪ್ಯಾಲೆಸ್ತೀನ್ ಜನರ ಈ ಸ್ಥಿತಿ ಮುಂದುವರಿದಿರುವುದು ಜಗತ್ತಿನ ಎಲ್ಲ ಮುಕ್ತ ದೇಶಗಳನ್ನು ಕೆರಳಿಸಿದೆ. ಈ ಕೃತ್ಯಗಳು ಹೆಚ್ಚುವರಿ ಪ್ರಾದೇಶಿಕ ಪರಿಣಾಮಗಳನ್ನು ಉಂಟುಮಾಡಲಿದೆ” ಎಂದು ತಿಳಿಸಿದ್ದಾರೆ.
ಶೋಷಿತರು ಹಾಗೂ ಮಹಿಳೆಯರು ಮತ್ತು ಮಕ್ಕಳ ದುರಂತ ಅಂತ್ಯ ಮತ್ತು ಆಸ್ಪತ್ರೆಗಳು, ಶಾಲೆಗಳು, ಮಸೀದಿಗಳು, ಚರ್ಚ್ಗಳು ಹಾಗೂ ವಸತಿ ಸ್ಥಳಗಳ ಮೇಲಿನ ದಾಳಿಗಳನ್ನು ಯಾವುದೇ ಮನುಷ್ಯರ ದೃಷ್ಟಿಕೋನದಿಂದಲೂ ಖಂಡನಾರ್ಹ ಮತ್ತು ಅವುಗಳನ್ನು ಒಪ್ಪಲಾಗದು” ಎಂದು ಹೇಳಿದ್ದಾರೆ.
“ಇಸ್ರೇಲ್ ಆಡಳಿತದ ದುರಾಕ್ರಮಣವನ್ನು ಎದುರಿಸಲು ಪ್ಯಾಲೆಸ್ತೀನ್ನ ಪ್ರತಿರೋಧ ಗುಂಪುಗಳಿಗೆ ಎಲ್ಲಾ ಕಾನೂನಾತ್ಮಕ ಹಕ್ಕು ಇದೆ. ಶೋಷಣೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಪ್ಯಾಲೆಸ್ತೀನಿ ಜನರನ್ನು ಎಲ್ಲಾ ದೇಶಗಳೂ ಬೆಂಬಲಿಸಬೇಕು” ಎಂದು ರೈಸಿ ಪ್ರಧಾನಿ ಜೊತೆ ಹೇಳಿದ್ದಾರೆ ಎನ್ನಲಾಗಿದೆ.