ನ್ಯೂಸ್ ನಾಟೌಟ್: ಪೊಲೀಸ್ ಠಾಣೆಗೆ ಸಂಜೆ ವೇಳೆ ಹೋದ್ರೆ ಮೊಬೈಲ್ ನಲ್ಲಿ ಟಾರ್ಚ್ ಹಾಕಿಕೊಂಡು ದೂರು ನೀಡಲು ನಿಲ್ಲುವಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಟಾರ್ಚ್ ಲೈಟ್ ಹಿಡಿದು ನಿಲ್ಲುವ ಸ್ಥಿತಿ ಎದುರಾಗಿದ್ದು ಠಾಣೆ ವಿರುದ್ದ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಪದೇ ಪದೇ ಲೋಡ್ ಶೆಡ್ಡಿಂಗ್ ಮೂಲಕ ಪವರ್ ಕಟ್ ಮಾಡ್ತಿದ್ದು ಒಮ್ಮೆ ಕರೆಂಟ್ ಕಟ್ ಆದ್ರೆ ಕನಿಷ್ಟ ಒಂದು ಗಂಟೆ ವಾಪಸ್ ಕರೆಂಟ್ ಬರುತ್ತಿಲ್ಲ ಎನ್ನಲಾಗಿದೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಇದ್ದ ಯುಪಿಎಸ್ ಸಹ ಕೆಟ್ಟು ಸಾಕಷ್ಟು ದಿನವಾಗಿದ್ದು ಅದನ್ನ ರಿಪೇರಿ ಮಾಡುವ ಕೆಲಸಕ್ಕೂ ಪೊಲೀಸರು ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪೊಲೀಸ್ ಠಾಣೆಗೆ ಸಂಜೆ ವೇಳೆ ಸಾರ್ವಜನಿಕರು ಬಂದ್ರೆ ಮೊಬೈಲ್ ಬೆಳಕನ್ನ ಹಾಕಿಕೊಂಡು ದೂರು ಬರೆದು ಕೊಡುವ ದುಃಸ್ಥಿತಿ ಎದುರಾಗಿದೆ. ಪವರ್ ಕಟ್ ನಿಂದ ಸಾಕಷ್ಟು ಸಮಸ್ಯೆಯಾಗ್ತಿದೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕ್ತಿದ್ದಾರೆ ಎಂದು ವರದಿ ತಿಳಿಸಿದೆ.