ನ್ಯೂಸ್ ನಾಟೌಟ್ : ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ರಾಜ್ಯ ಬರದಿಂದ ತತ್ತರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲಾ ರಾಜ್ಯ ಬರದಿಂದ ತತ್ತರಿಸುತ್ತದೆ.
ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ದೇವರೇ ಬಯಸುವುದಿಲ್ಲ ಎಂಬಂತಾಗಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವು ಭೀಕರ ಪ್ರವಾಹವನ್ನು ಎದುರಿಸಿತ್ತು. ಈ ವೇಳೆ ಯಡಿಯೂರಪ್ಪ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪ್ರವಾಹದಿಂದಾಗಿ ಜನರು ಸಂಕಷ್ಟದಲ್ಲಿದ್ದಾಗ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರು. ಕೇಂದ್ರದ ಅನುದಾನಕ್ಕೆ ಕಾಯಲಿಲ್ಲ. ಬದಲಾಗಿ, ಜನರಿಗೆ ಪರಿಹಾರ ನೀಡಲು ಲಭ್ಯವಿರುವ ಹಣವನ್ನು ಬಳಸಿದ್ದರು, ಬರ ನಿರ್ವಹಣೆ ಮಾಡದ ಕಾಂಗ್ರೆಸ್ ಸರಕಾರಕ್ಕೆ ರೈತರು ಹಿಡಿಶಾಪ ಹಾಕುತ್ತಿದ್ದು, ಅವರ ಶಾಪವೇ ಸರಕಾರ ಪತನಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇನ್ನೂ 900 ಕೋಟಿಗೂ ಅಧಿಕ ಎನ್ಡಿಆರ್ಎಫ್ ನಿಧಿ ಇದೆ, ಸರಕಾರ ಅದನ್ನು ಸದುಪಯೋಗಪಡಿಸಿಕೊಂಡು ರೈತರಿಗೆ ತಕ್ಷಣದ ಪರಿಹಾರ ಒದಗಿಸಬೇಕು ಎಂದರು.
ಕೇಂದ್ರವು ಖಂಡಿತವಾಗಿಯೂ ಹಣವನ್ನು ನೀಡುತ್ತದೆ ಮತ್ತು ಹಣವನ್ನು ತರಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ. ರೈತರಿಗೆ ತಕ್ಷಣದ ಪರಿಹಾರದ ಅಗತ್ಯವಿರುವುದರಿಂದ ಸಿಎಂ ರೈತರನ್ನು ರಕ್ಷಿಸಲು ಲಭ್ಯವಿರುವ ಹಣವನ್ನು ಬಳಸಬೇಕು ಎಂದು ಆಗ್ರಹಿಸಿದ್ದಾರೆ.