ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಚಿಕ್ಕಮಗಳೂರಿನಿಂದ ವರದಿಯಾಗಿದೆ.ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ ಕ್ರಾಸ್ ಬಳಿ ನ.4ರ ಶನಿವಾರಈ ಭೀಕರ ದುರ್ಘಟನೆ ಸಂಭವಿಸಿದ್ದು,ಯಲಹಂಕ ನಿವಾಸಿ ಸುರೇಖಾ (45) ಮೃತ ಮಹಿಳೆಯೆಂದು ತಿಳಿದು ಬಂದಿದೆ.ಬೆಂಗಳೂರಿಂದ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರ ಬಸ್ ನಲ್ಲಿ ಸುಮಾರು 48ಕ್ಕೂ ಹೆಚ್ಚು ಪ್ರವಾಸಿಗರಿದ್ದರು ಎಂದು ಹೇಳಲಾಗಿದೆ. ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ಹೋಗುತ್ತಿದ್ದ ಬಸ್ ಇದಾಗಿದೆ.ಗಾಯಾಳುಗಳಿಗೆ ಮೂಡಿಗೆರೆ, ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ಹತ್ತಾರು ಬಾರಿ ಸ್ಥಳಿಯರು ಮನವಿ ಮಾಡಿದ್ದರೂ ಇದೇ ಜಾಗದಲ್ಲಿ ಈ ಹಿಂದೆ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆಯೆಂದು ಹೇಳಲಾಗಿದೆ.ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.