ನ್ಯೂಸ್ ನಾಟೌಟ್ : ತುಲಾಭಾರ ನಡೆಯುವ ವೇಳೆ ತಕ್ಕಡಿ ಕುಸಿದು ಬಿದ್ದು ಪೇಜಾವರ ಶ್ರೀಗಳು ಗಾಯಗೊಂಡಿದ್ದಾರೆ. ದೆಹಲಿಯಲ್ಲಿ ಭಕ್ತರು ತುಲಾಭಾರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಈ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವ ದೆಹಲಿಯಲ್ಲಿ ಅದ್ದೂರಿ ಕಾರ್ಯಕ್ರಮಗಳು ಏರ್ಪಾಟಾಗಿವೆ. ಒಟ್ಟು ಐದು ದಿನಗಳ ಕಾರ್ಯಕ್ರಮದಲ್ಲಿ ನಾನಾ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ, ಶಿಷ್ಯರೆಲ್ಲಾ ಸೇರಿ ಪೇಜಾವರ ಶ್ರೀಗಳಿಗೆ ತುಲಾಭಾರ ಏರ್ಪಡಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತಕ್ಕಡಿ ಕುಸಿದು, ತಕ್ಕಡಿಯ ಮೇಲ್ಭಾಗ ಶ್ರೀಗಳ ತಲೆಯ ಮೇಲೆ ಉರುಳಿದೆ. ಆತಂಕಗೊಂಡ ಭಕ್ತರು ಸುತ್ತುವರಿಯುತ್ತಿದ್ದಂತೆ, ಕೈ ಸನ್ನೆಯ ಮೂಲಕ ಸ್ವಾಮೀಜಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯ ತಕ್ಕಡಿ ಕುಸಿದು ಬಿದ್ದ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ನಯೋಲಿನ್ ಹಗ್ಗದ ಮೂಲಕ ತಕ್ಕಡಿಯನ್ನು ಕಟ್ಟಿರುವುದರಿಂದ ಶಿಥಿಲಗೊಂಡ ಹಗ್ಗ ತುಂಡಾಗಿ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಭೂಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿ ತಕ್ಕಡಿ ಇದ್ದ ಕಾರಣ ಪೇಜಾವರ ಶ್ರೀಗಳಿಗೆ ಕುಸಿದು ಬಿದ್ದು ಯಾವುದೇ ಹಾನಿಯಾಗಿಲ್ಲ. ಆದರೆ ತಲೆಯ ಭಾಗಕ್ಕೆ ಗಾ* ಯವಾಗಿದೆ ಎಂದು ವರದಿ ತಿಳಿಸಿದೆ.
ತುಲಾಭಾರ ಮುಗಿಯುತ್ತಿದ್ದಂತೆ ಸುಧಾರಿಸಿಕೊಂಡ ಶ್ರೀಗಳು, ನಂತರ ಎರಡು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥರು ಅಪ್ರತಿಮ ಯೋಗಪಟುವಾಗಿದ್ದಾರೆ. ಶ್ರೀಗಳಿಗೆ 60 ವರ್ಷ ವಯಸ್ಸು ತುಂಬಿದೆ ಎಂದರೆ ನಂಬಲು ಸಾಧ್ಯವಿಲ್ಲ. ಈಗಲೂ ಪ್ರತಿದಿನ ಕಠಿಣ ಹಠ ಯೋಗಗಳನ್ನು ಮಾಡುತ್ತಾರೆ, ಹಾಗಾಗಿ ಅವರಿಗೇನೂ ಆಗದು ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.