ನ್ಯೂಸ್ ನಾಟೌಟ್ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯದ ನಕ್ಷೆಯ ಚಿತ್ರವನ್ನು ಬಿಡಿಸಿ ಗಮನ ಸೆಳೆದವರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬರು ವ್ಯಕ್ತಿ ಮರದಿಂದಲೇ ಕರ್ನಾಟಕ ರಾಜ್ಯದ ನಕ್ಷೆಯನ್ನು ಕೆತ್ತನೆ ಮಾಡಿರುವ ಘಟನೆ ನಡೆದಿದೆ.ಈ ಮೂಲಕ ಇಷ್ಟು ಎತ್ತರದ ಕರ್ನಾಟಕ ಭೂಪಟವನ್ನು ಮೊದಲ ಬಾರಿಗೆ ರಚಿಸಿರುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ..!
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿದ್ದಿವಿನಾಯಕ ವುಡ್ ವರ್ಕ್ಸ್ನ ವಕ್ವಾಡಿ ಗಣೇಶ್ ಆಚಾರ್ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಾಡುಜಾತಿ ಮರದಿಂದ ತಯಾರಿಸಿದ ಕರ್ನಾಟಕ ಭೂಪಟ ಸಾಗರದ ಜನರ ಗಮನ ಸೆಳೆದಿದ್ದಲ್ಲದೇ ಇಡೀ ರಾಜ್ಯದಲ್ಲೇ ಇದೀಗ ಸುದ್ದಿಯಾಗಿದೆ.ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆಟೋ ಚಾಲಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಭೂಪಟವನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.ಇದು ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.
ಒಂದೇ ಕಾಡು ಜಾತಿ ಹಲಗೆಯಲ್ಲಿ ಸುಮಾರು ಅರವತ್ತೆರಡು ಇಂಚು ಎತ್ತರ, ಮೂವತ್ತೆರಡು ಇಂಚು ಅಗಲವಿದ್ದು, ಎರಡು ಇಂಚು ದಪ್ಪದಲ್ಲಿ ವಿಶೇಷವಾಗಿ ಕರ್ನಾಟಕ ಭೂಪಟವನ್ನು ರಚನೆ ಮಾಡಲಾಗಿದೆ. ಮಾತ್ರವಲ್ಲ ಅದರಲ್ಲಿ 31 ಜಿಲ್ಲೆಗಳ ಹೆಸರನ್ನು ಶಿವಾನೆ ಮರದಲ್ಲಿ ಕೆತ್ತನೆ ಮಾಡಿ ಅಂಟಿಸಲಾಗಿದೆ, ಈ ವಿಶೇಷ ಆಕರ್ಷಣೆಯ ಕರ್ನಾಟಕ ಭೂಪಟವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿ ಗಣೇಶ್ ಆಚಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.