ನ್ಯೂಸ್ ನಾಟೌಟ್ : ಹಲವು ವರ್ಷಗಳಿಂದ ಪತ್ರಿಕೋದ್ಯಮವು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ವೃತ್ತಿಯಾಗಿ ಮಾರ್ಪಟ್ಟಿದೆ. ಯುದ್ಧ, ನೈಸರ್ಗಿಕ ವಿಕೋಪ ಅಥವಾ ಇತರ ಅಪಾಯಕಾರಿ ಪ್ರದೇಶಗಳಲ್ಲಿ ವರದಿ ಮಾಡುವಾಗ ಅನೇಕ ಮಾಧ್ಯಮ ಸಿಬ್ಬಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಮ,ತ್ತು ಕಾಣೆಯಾಗುತ್ತಿದ್ದಾರೆ.
ದೇಶವಿರೋಧಿ ಕೃತ್ಯಗಳು ಸೇರಿದಂತೆ ಇತರೆ ಅಕ್ರಮ ಎಸಗುವವರ ವಿರುದ್ಧ ವರದಿ ಪ್ರಕಟವಾದ ನಂತರ ಹಲವು ಪತ್ರಕರ್ತರ ಹತ್ಯೆಗಳಾಗಿವೆ.
ಹತ್ತರ ಪೈಕಿ ಒಂಬತ್ತು ಪತ್ರಕರ್ತರ ಹತ್ಯೆ ಪ್ರಕರಣ ಬಗೆಹರಿದಿಲ್ಲ. ಪತ್ರಕರ್ತರ ಹತ್ಯೆ ಅಸ್ಪಷ್ಟವಾಗಿ ಉಳಿಯಬಾರದು. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ 2014ರಿಂದ ಪ್ರತಿ ವರ್ಷ ‘ಇಂಟರ್ನ್ಯಾಷನಲ್ ಡೇ ಟು ಎಂಡ್ ಇಂಪ್ಯೂನಿಟಿ ಫಾರ್ ಕ್ರೈಮ್ಸ್ ಅಗೈನ್ಸ್ಟ್ ಜರ್ನಲಿಸ್ಟ್ಸ್’ ಎಂಬ ದಿನವನ್ನು ನವೆಂಬರ್ 2ರಂದು ಆಚರಿಸಲಾಗುತ್ತದೆ. ಈ ವರ್ಷದ ದಿನದ ಕಾರ್ಯಕ್ರಮವನ್ನು ‘ಪತ್ರಕರ್ತರ ಮೇಲಿನ ಹಿಂಸಾಚಾರ, ಚುನಾವಣಾ ಸಮಗ್ರತೆ ಮತ್ತು ಸಾರ್ವಜನಿಕ ನಾಯಕತ್ವದ ಪಾತ್ರ’ ಎಂಬ ಘೋಷ ವಾಕ್ಯದೊಂದಿಗೆ ಚರ್ಚಿಸಲಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಆ್ಯಂಡ್ ಕಲ್ಚರಲ್ ಆರ್ಗನೈಸೇಶನ್ನಿನ (ಯುನೆಸ್ಕೋ) UNESCO Observatory of Killed Journalists ಪ್ರಕಾರ, 1993ರಿಂದ ಇಲ್ಲಿಯವರೆಗೆ 1,600ಕ್ಕೂ ಹೆಚ್ಚು ಪತ್ರಕರ್ತರನ್ನು ಕೊಲೆ ಮಾಡಲಾಗಿದೆ.
ಯುನೆಸ್ಕೋ ಪ್ರಕಾರ, 2020-2021ರಲ್ಲಿ 117 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಶೇ 38ರಷ್ಟು ಕೊಲೆಗಳು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಲ್ಲಿ ನಡೆದರೆ, ಇನ್ನು ಶೇ 32ರಷ್ಟು ಕೊಲೆಗಳು ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ವರದಿಯಾಗಿವೆ.
ಪತ್ರಕರ್ತರ ವಿರುದ್ಧದ ಅಪರಾಧಗಳಲ್ಲಿ ಕೇವಲ ಶೇ 14 ದಷ್ಟು ಪ್ರಕರಣಗಳನ್ನು ನ್ಯಾಯಾಂಗವಾಗಿ ಬಗೆಹರಿಸಲಾಗಿದೆ ಎಂದು ತಿಳಿದುಬಂದಿದೆ.
ಹತ್ಯೆಯಾದ ಮಾಧ್ಯಮ ಸಿಬ್ಬಂದಿಯ ಬಗ್ಗೆ ಸಾಕಷ್ಟು ವಿವರವಾದ ಮಾಹಿತಿ cpj.org ವೆಬ್ಸೈಟ್ನಲ್ಲಿ ಲಭ್ಯವಿದೆ. ಇದರಲ್ಲಿ ಮೃತ ಪತ್ರಕರ್ತರ ಹೆಸರು, ಸಂಸ್ಥೆಗಳು, ಸಾವಿನ ದಿನಾಂಕ ಹಾಗೂ ಸಾವಿಗೆ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಎನ್ನಲಾಗಿದೆ.