ನ್ಯೂಸ್ ನಾಟೌಟ್: ಇಸ್ರೇಲ್ ಹಾಗೂ ಹಮಾಸ್ ಸಂಘರ್ಷದ ನಂತರ ಮೊದಲ ಬಾರಿಗೆ ಗಾಜಾದಿಂದ ಈಜಿಪ್ಟ್ಗೆ ರಫಾ ಕ್ರಾಸಿಂಗ್ ಮೂಲಕ ಬುಧವಾರ ಜನತೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ. 400ಕ್ಕೂ ಹೆಚ್ಚು ವಿದೇಶಿ ಪಾಸ್ಪೋರ್ಟ್ ಹೊಂದಿರುವವರಿಗೆ ಗಾಜಾವನ್ನು ತೊರೆಯಲು ಅನುಮತಿ ನೀಡಲಾಗಿದೆ ಎಂದು ಪ್ಯಾಲೇಸ್ಟೈನ್ ಕ್ರಾಸಿಂಗ್ ಪ್ರಾಧಿಕಾರ ತಿಳಿಸಿದೆ ಎನ್ನಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ಉಂಟಾಗಿ ಮೂರು ವಾರಗಳು ಕಳೆದಿವೆ. ನೂರಾರು ಜನರು ವಿವಿಧ ಸಮಯಗಳಲ್ಲಿ ಬಂದು ರಫಾ ಕ್ರಾಸಿಂಗ್ಗೆ ಬಂದು ಜಮಾಯಿಸಿದ್ದರು. ಆದರೆ, ಈಜಿಪ್ಟ್, ಇಸ್ರೇಲ್ ಮತ್ತು ಹಮಾಸ್ ನಡುವಿನ ಬಿಕ್ಕಟ್ಟಿನಿಂದಾಗಿ ಅಲ್ಲಿಂದ ಹೊರಬರಲು ಅನುಮತಿ ನೀಡಿರಲಿಲ್ಲ.
ಇತ್ತೀಚೆಗೆ ಹಮಾಸ್ ಬಿಡುಗಡೆ ಮಾಡಿದ್ದ ನಾಲ್ವರು ಒತ್ತೆಯಾಳುಗಳನ್ನು ಹೊರತುಪಡಿಸಿ ಯಾರಿಗೂ ಗಾಜಾವನ್ನು ತೊರೆಯಲು ಅವಕಾಶ ಕೊಟ್ಟಿರಲಿಲ್ಲ. ಇದರ ನಡುವೆ ಈ ವಾರದ ಆರಂಭದಲ್ಲಿ ಮತ್ತೊಬ್ಬ ಬಂಧಿತನನ್ನು ಇಸ್ರೇಲ್ ಪಡೆಗಳು ರಕ್ಷಣೆ ಮಾಡಿದ್ದರು ಎನ್ನಲಾಗಿದೆ.
ಇದೀಗ ಸಂಘರ್ಷದಲ್ಲಿ ಗಾಯಗೊಂಡ 80ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗಾಜಾದಿಂದ ಈಜಿಪ್ಟ್ಗೆ ಬುಧವಾರ ಕರೆದುಕೊಂಡು ಬರಲಾಗಿದೆ ಎಂದು ಈಜಿಪ್ಟ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಈಜಿಪ್ಟ್ ಕಡೆಯಿಂದ ಆಂಬ್ಯುಲೆನ್ಸ್ಗಳು ರಾಫಾ ಕ್ರಾಸಿಂಗ್ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಹತ್ತಿರದ ಪಟ್ಟಣವಾದ ಶೇಖ್ ಜುವೈದ್ನಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲಾಗಿದೆ. ಈ ಸಂಘರ್ಷ ಶುರುವಾದ ನಂತರ ಅಲ್ಲಿಂದ ಹೊರಬಂದ ಜನರನ್ನು ಗಾಜಾಕ್ಕೆ ಮರಳಲು ಇಸ್ರೇಲ್ ಅನುಮತಿಸುವುದಿಲ್ಲ ಎಂಬ ಕಾರಣದಿಂದಾಗಿ ಪ್ಯಾಲೆಸ್ಟೈನ್ ನಿರಾಶ್ರಿತರನ್ನು ಸ್ವೀಕರಿಸುವುದಿಲ್ಲ ಎಂದು ಈಜಿಪ್ಟ್ ಹೇಳಿತ್ತು ಎನ್ನಲಾಗಿದೆ.