ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ತಮ್ಮ ಕಳೆದುಹೋದ ಅಮೂಲ್ಯ ವಸ್ತುಗಳು ಮರಳಿ ನಮ್ಮ ಕೈ ಸೇರುವುದು ಬಹಳ ಅಪರೂಪ. ಅಂಥದರಲ್ಲಿ ಮೊಬೈಲ್, ಪರ್ಸ್ ಕಳೆದುಹೋದರೆ ಅದರ ಆಸೆಯನ್ನೇ ಬಿಟ್ಟು ಬಿಡಬೇಕಾದಿತು. ಆದರೆ ಕೆಲವೊಮ್ಮೆ ಕಳೆದು ಹೋದ ವಸ್ತುಗಳು ಪ್ರಾಮಾಣಿಕ ವ್ಯಕ್ತಿಗಳಿಗೆ ಸಿಕ್ಕಿದರೆ ಅದು ಮಾತ್ರ ಮರಳಿ ವಾರಿಸುದಾರರಿಗೆ ತಲುಪುತ್ತದೆ. ಇಂಥದೊಂದು ಘಟನೆಗೆ ಸಾಕ್ಷಿಯಾಗಿದೆ ಈ ಮೊಬೈಲ್ ಸ್ಟೋರಿ.
ಅಜ್ಜಾವರದ ಪ್ರಕಾಶ್ ಎಂಬವರಿಗೆ ಸೇರಿದ ಮೊಬೈಲ್ ಸೋಮವಾರ ಸಾಯಂಕಾಲ (ಅ. 30) ಸುಳ್ಯದ ಶ್ರೀರಾಮ್ ಪೇಟೆಯಲ್ಲಿ ಇವರಿಗೆ ಅರಿವಿಲ್ಲದೆಯೇ ಕೆಳಗೆ ಬಿದ್ದಿತ್ತು. ನಂತರ ಸ್ವಲ್ಪ ಸಮಯ ಕಳೆದು ನೋಡಿದಾಗ ಮೊಬೈಲ್ ಕಳೆದುಹೋದದ್ದು ಗಮನಕ್ಕೆ ಬಂತು. ತಕ್ಷಣ ಅ ನಂಬರ್ಗೆ ಫೋನಾಯಿಸಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಆಗ ಪ್ರಕಾಶ್ ಅವರು ಮೊಬೈಲ್ನ ಆಸೆ ಬಿಟ್ಟಿದ್ದರು.
ಆದರೆ ಈ ಮೊಬೈಲ್ ಫೋನ್ ಸುಳ್ಯದ ಜೂನಿಯರ್ ಕಾಲೇಜು ರಸ್ತೆ ಸಮೀಪದಲ್ಲಿರುವ ನೇಸರ ಜೆರಾಕ್ಸ್ ಅಂಗಡಿಯ ಮಾಲೀಕ ನಾರಾಯಣ ಎಂಬವರಿಗೆ ಸಿಕ್ಕಿತ್ತು. ಅವರು ನೋಡುವಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಅಂಗಡಿಗೆ ಬಂದು ಮೊಬೈಲ್ ಚಾರ್ಜ್ಗಿಟ್ಟು ಆನ್ ಮಾಡಿ ಬಳಿಕ ವಾರಿಸುದಾರರನ್ನು ಸಂಪರ್ಕಿಸಿ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ವಾರಿಸುದಾರರರಿಗೆ ಮೊಬೈಲ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ನಾರಾಯಣ ಅವರ ಪ್ರಾಮಾಣಿಕತೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.