ನ್ಯೂಸ್ ನಾಟೌಟ್: ಅದೇನೋ ಗೊತ್ತಿಲ್ಲ. ಕೆಲವರಿಗೆ ಭಾರತದಲ್ಲಿ ಬದುಕಲು ಬೇಕಾದಷ್ಟು ವೇತನ ಇದ್ದರೂ ಅದು ಸಾಕಾಗುವುದಿಲ್ಲ. ವಿಪರ್ಯಾಸ ಎಂದರೆ ವಿದೇಶದಲ್ಲಿ ಹೋಗಿ ಹೆಚ್ಚು ಹಣ ಸಂಪಾದಿಸ್ತಿನಿ ಅಂತ ದಲ್ಲಾಳಿಗಳ ದಾಳಕ್ಕೆ ಬಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡ ಅದೆಷ್ಟೋ ಯುವಕರಿದ್ದಾರೆ. ಅಂತಹವರ ಸಾಲಿಗೆ ಇದೀಗ ಮತ್ತೋರ್ವ ಯುವಕ ಕೂಡ ಸೇರಿಕೊಂಡಿದ್ದಾನೆ. ಇದೀಗ ಆತನ ಪರಿಸ್ಥಿತಿ ಜೀವಕ್ಕೆ ಕುತ್ತು ಬರುವಂತಿದೆ. ಕರುಳು ಹಿಂಡಿ ಬರುವಂತಿದೆ. ವಿದೇಶದಲ್ಲಿ ದುಷ್ಟರ ಸಂಚಿಗೆ ಸಿಲುಕಿ ಈಗ ವಿಲವಿಲ ಒದ್ದಾಡುತ್ತಿದ್ದಾನೆ.
ಚಿಕ್ಕಮಗಳೂರು ನರಸಿಂಹರಾಜಪುರ ತಾಲೂಕು ಮಾಗುಂಡಿ ಮಹಲ್ಗೋಡಿನ ಯುವಕ ಅಶೋಕ್ (26 ವರ್ಷ) ಭಾರಿ ವಂಚನೆಗೆ ಒಳಗಾದವರು. ಇವರನ್ನು ಡಾಟಾ ಎಂಟ್ರಿ ಕೆಲಸ ಕೊಡಿಸಿವುದಾಗಿ ನರಸಿಂಹರಾಜಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಕೆಲಸಕ್ಕೆ ಸೇರಿದ ಬಳಿಕ ಅಶೋಕನಿಗೆ ವಂಚನೆಯ ಜಾಲದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅರಿವಾಗಿದೆ. ಅಶೋಕ್ ನನ್ನನ್ನು ಬಿಡಿ ನಾನು ನಿಮ್ಮಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಭಾರತಕ್ಕೆ ವಾಪಸ್ ಹೋಗುವುದಾಗಿ ತಿಳಿಸಿದ್ದಾನೆ. ಆದರೆ ಅವರು ಅಲ್ಲಿಂದ ಅಶೋಕ್ ನನ್ನು ಹೋಗಲು ಬಿಡಲಿಲ್ಲ. ಕಳೆದೊಂದು ವಾರದಿಂದ ಕೊಠಡಿಯಲ್ಲಿಯೇ ಕೂಡಿ ಹಾಕಿದ್ದಾರೆ. ಭಾರತಕ್ಕೆ ಬಿಡುವುದಕ್ಕೆ 13 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದರೆ ಕಾಂಬೋಡಿಯಾದಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಗನನ್ನು ಭಾರತಕ್ಕೆ ಕರೆದು ತರುವಂತೆ ಕಣ್ಣೀರಿಟ್ಟು ಒತ್ತಾಯಿಸಿದ್ದಾರೆ.