ನ್ಯೂಸ್ ನಾಟೌಟ್: ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು (Cobra) ಓಡಿಸುವ ಸಲುವಾಗಿ ಮನೆ ಮಂದಿ ಸೇರಿ ಹೊಗೆ ಹಾಕಿದ್ದಾರೆ. ಆದರೆ ಈ ಘಟನೆಯಿಂದ ಇಡೀ ಮನೆಯನ್ನೇ ಭಸ್ಮವಾದ ಪ್ರಕರಣ ಉತ್ತರಪ್ರದೇಶದಲ್ಲಿ ವರದಿಯಾಗಿದೆ.
ಈ ಘಟನೆ ಉತ್ತರಪ್ರದೇಶದ ಬಂದ ಎಂಬಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮನೆ ಮಂದಿಗೆ ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.
ಏನೇ ಮಾಡಿದರೂ ಹಾವು ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರೆ. ಈ ಹೊಗೆಯಿಂದ ಬೆಂಕಿ ಮನೆಪೂರ್ತಿ ಹರಡಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಕ್ವಿಂಟಾಲ್ ಗಟ್ಟಲೆ ಧಾನ್ಯಗಳು ಭಸ್ಮವಾದವು.
ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವಮಾನದ ಉಳಿತಾಯ, ಆಸ್ತಿ ಸೇರಿದಂತೆ ಲಕ್ಷಗಟ್ಟಲೆ ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.