ನ್ಯೂಸ್ ನಾಟೌಟ್: ನನ್ನ ಎದುರು ನಿಂತಿರುವ ನೀವೆಲ್ಲರೂ ಧರ್ಮ ಸೈನಿಕರು, ಶಿಷ್ಟ ರಕ್ಷಣೆಯನ್ನು ಯಾರು ಮಾಡಬೇಕು..? ನೀವೇ ಮಾಡಬೇಕು.. ನಮ್ಮ ಸೇವಾ ಯೋಜನೆಗಳನ್ನು ಜನ ಇಷ್ಟ ಪಡ್ತಾರೆ.. ಅದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಧರ್ಮ ಸಂರಕ್ಷಣಾ ಯಾತ್ರೆಗೆ ದೂರ ಊರುಗಳಿಂದ ಬಂದಿದ್ದೀರಿ. ನಮ್ಮ ಯಾವುದೇ ಸಹಾಯವನ್ನು ಅಪೇಕ್ಷಿಸದೆ ಬಂದಿದ್ದೀರಿ. ನೀವೆಲ್ಲರು ಏನನ್ನೂ ಬಯಸದೆ ಇಲ್ಲಿಗೆ ಬಂದಿದ್ದೀರಿ ಎಂದರೆ ಅದು ಶಿಷ್ಟ ರಕ್ಷಣೆಗೆ ನೀವು ನೀಡಿರುವ ದೊಡ್ಡ ಸೇವೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಧರ್ಮಸಂರಕ್ಷಣಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಒಂದು ದೇಶವನ್ನು ಹಾಳು ಮಾಡಬೇಕೆಂದರೆ ಅದರ ಸಂಸ್ಕೃತಿಯನ್ನು ನಾಶ ಮಾಡಿದರೆ ಸಾಕು, ಆ ದೇಶ ಸಾಯುತ್ತದೆ ಅನ್ನುವ ಮಾತಿದೆ. ಪ್ರವೃತ್ತಿಯನ್ನು, ಸ್ವಭಾವನ್ನು ನಾಶ ಮಾಡಿದರೆ ಅಲ್ಲಿಗೆ ಆ ದೇಶ ಸರ್ವನಾಶವಾಗುತ್ತದೆ. ಅದು ದೊಡ್ಡ ಕೆಲಸ. ಯಾವ ಕಾರಣಕ್ಕೂ ದೇಶದ ಸಂಸ್ಕೃತಿ ನಾಶ ಆಗೋಕೆ ಬಿಡಬೇಡಿ. ಇಂದು ನಮ್ಮ ಕ್ಷೇತ್ರಕ್ಕೆ ಬಂದಿರುವ ಅಪಾಯ ನಾಳೆ ಬೇರೆ ಕ್ಷೇತ್ರಕ್ಕೂ ಬರಬಹುದು. ನನ್ನ ಕ್ಷೇತ್ರಕ್ಕೆ ವಿಷ ಕಂಠನದ್ದು, ಎಲ್ಲರಿಗೂ ಆ ಶಕ್ತಿ ಬರುವುದಿಲ್ಲ. ನಮ್ಮ ಸನ್ನಿಧಾನದಲ್ಲಿ ಮಂಜುನಾಥನನಿಗೆ ವಿಷವನ್ನು ಹೀರುವ ಶಕ್ತಿಯಿದೆ. ಹಾಗಾಗಿ ನಮ್ಮ ಸನ್ನಿಧಾನದಲ್ಲಿ ಒಂದು ಪ್ರತಿಜ್ಞೆ ಮಾಡೋಣ. ವಿಷವನ್ನು ಸ್ವೀಕರಿಸುವ ನೀನು ನಮ್ಮನ್ನು ರಕ್ಷಣೆ ಮಾಡಬೇಕು ಎಂದು. ಇವತ್ತು ನೋಡಿ ಮಳೆ ಬರುತ್ತಿದೆ. ಇದು ಇನ್ನೊಂದು ಪರೀಕ್ಷೆ. ಯಾರು ನಮ್ಮೆದುರು ನಿಲ್ತಾರೋ ಅಥವಾ ಓಡ್ತಾರೋ ಅನ್ನುವ ಪರೀಕ್ಷೆ ಇದು. ಈ ಪರೀಕ್ಷೆಯಲ್ಲಿ ನೀವು ಯಾರು ಓಡಿಲ್ಲ. ಮಳೆಯನ್ನು ಲೆಕ್ಕಿಸದೆ ನಿಂತಿದ್ದೀರಿ ಎಂದರೆ ಈ ಸವಾಲನ್ನು ಗೆದ್ದಿದ್ದೀರಿ ಎಂದರ್ಥ. ವೈಯಕ್ತಿಕವಾಗಿ ನನಗೆ ಯಾವ ಹಾನಿಯೂ ಆಗಿಲ್ಲ. ಹಿಂದೆ ಹೇಗೆ ನಡೆಯುತ್ತಿತ್ತೋ ಹಾಗೆಯೇ ಈಗಲೂ ಧರ್ಮಸ್ಥಳದಲ್ಲಿ ಸೇವೆ ನಡೆಯುತ್ತಿದೆ. ಆದರೆ ವೈಯಕ್ತಿಕವಾದ ನಿಂದನೆಯಿಂದ ಒಂದು ಸಂಸ್ಕೃತಿಯ ನಾಶಕ್ಕೆ ಯತ್ನ ನಡೆಸಲಾಗುತ್ತಿದೆ. ಯುವಕರ ಧರ್ಮ ಪ್ರಜ್ಞೆಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಇದರಿಂದ ದೇಶ ನಾಶವಾಗುತ್ತದೆ. ಹೀಗಾಗಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ನೀವೆಲ್ಲರೂ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
ಮಂಜುನಾಥ ಸ್ವಾಮಿ ಇಬ್ಬರು ಶಿವ ಗಣಗಳನ್ನು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ಒಬ್ಬರು ಕುಂದಾಪುರದವರು ಮತ್ತೊಬ್ಬರು ಬೆಂಗಳೂರಿನವರು. ಅವರು ಯಾರು ಅನ್ನುವುದನ್ನು ನಾನು ಹೆಸರು ಹೇಳುವುದಿಲ್ಲ. ಅವರಿಂದಾಗಿ ನಾನು ನಿಮ್ಮ ಮುಂದೆ ನಿಲ್ಲುವಂತಾಯಿತು. ಅವರು ಸತ್ಯದ ಪರ ಮಾತನಾಡಿದ್ದಾರೆ. ಸತ್ಯದ ಶೋಧನೆಯನ್ನು ಮಾಡಿದ್ದಾರೆ. ನಾನು ಒಂದು ಹೇಳ್ತೆನೆ , ನೀವು ನಮಗೆ ಉಪಕಾರ ಮಾಡಿಲ್ಲ. ಸತ್ಯದ ಪರವಾಗಿ ನಿಂತು ಸೇವೆ ಮಾಡಿದ್ದೀರಿ. ನಮ್ಮ ಸತ್ಯದ ಪರ ಮಾತನಾಡಿದ ಅವರನ್ನು ಆ ಮಂಜುನಾಥನೇ ಹಿಂದೆ ನಿಂತು ಕಾಪಾಡುತ್ತಾನೆ. ನಮ್ಮ ಕುಟುಂಬ ವರ್ಗ ಎಷ್ಟು ದಿವಸಗಳಿಂದ ದುಃಖ ಅನುಭವಿಸಿದ್ದಾರೆ. ಅನಾವಶ್ಯಕವಾಗಿ ಬಂದ ಆರೋಪಗಳಿಂದ ಅವರೆಷ್ಟು ನೊಂದಿದ್ದಾರೆ ಅನ್ನುವುದನ್ನು ನಾನಿಲ್ಲಿ ಹೇಳಲಾರೆ. ಆದರೆ ಇಲ್ಲಿ ಬಂದಿರುವ ಮಳೆ ಅದನ್ನೆಲ್ಲ ಕೊಚ್ಚಿಕೊಂಡು ಹೋಗಲಿ ಎಂದು ಹೇಳುತ್ತೇನೆ ಎಂದು ತಿಳಿಸಿದರು.
“