ನ್ಯೂಸ್ ನಾಟೌಟ್ : ಚುನಾವಣೆ ವೇಳೆ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನವೇ ಮುಖ್ಯವಾಗಿರುತ್ತದೆ.ಅದರಲ್ಲೂ ರಾಜಕಾರಣಿಗಳ ಹಿಂದೆ ಹಿಂದೆ ಒಂದು ದೊಡ್ಡ ಜನ ಸಮೂಹವೇ ಇರುತ್ತದೆ.ಜೈಕಾರಗಳನ್ನು ಕೂಗುತ್ತಾ ತಮ್ಮ ನಾಯಕನನ್ನು ಹುರಿದುಂಬಿಸಿ ಹೆಜ್ಜೆ ಹಾಕೋದನ್ನು ನಾವು ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಕತ್ತೆಯ ಮೇಲೆ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವೆಂಬಂತಿದೆ.ಅಷ್ಟಕ್ಕೂ ಇದ್ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಈ ಘಟನೆ ವರದಿಯಾಗಿದ್ದು, ಮಧ್ಯಪ್ರದೇಶದ ಬುರ್ಹಾನ್ಪುರ ಕ್ಷೇತ್ರದಲ್ಲಿ.ಅಲ್ಲಿನ ಸ್ವತಂತ್ರ ಅಭ್ಯರ್ಥಿ ಪ್ರಿಯಾಂಕ್ ಸಿಂಗ್ ಠಾಕೂರ್ ಅವರು ಕತ್ತೆಯ ಮೇಲೆ ಬಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ತಹಸೀಲ್ದಾರ್ ಕಚೇರಿ ಮುಂದೆ ಬಂದ ಅವರು ಕತ್ತೆಯ ಮೇಲಿನಿಂದ ಇಳಿದು ನಾಮಪತ್ರ ಸಲ್ಲಿಸಿದ್ದಾರೆ.ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್, ಜನರನ್ನು ಕತ್ತೆಯ ರೀತಿ ನಡೆಸಿಕೊಳ್ಳುತ್ತಿರುವ ರಾಜಕಾರಣಿಗಳ ವಿರುದ್ಧ ಈ ರೀತಿಯಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಬುರ್ಹಾನ್ಪುರದಿಂದ ಸ್ಪರ್ಧಿಸಲು ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಕೋರಿದ್ದರೂ, ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.ಕತ್ತೆಯ ಚಿಹ್ನೆಯಡಿ ಸ್ಪರ್ಧಿಸಲು ಚುನಾವಣಾ ಆಯೋಗದಿಂದ ಅನುಮತಿ ಕೇಳಲಾಗಿತ್ತಾದರೂ ಅದು ಲಭ್ಯವಾಗಿಲ್ಲ ಎಂದ ಅವರು ನನಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿರುವುದು ಬಿಜೆಪಿಯ ತಪ್ಪು ನಿರ್ಧಾರ.ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆ ಅನ್ನೋದು ಗೊತ್ತಾಗಲಿದೆ ಎಂದರು.
ಗೆದ್ದ ನಂತರ ಬಿಜೆಪಿಯನ್ನು ಬೆಂಬಲಿಸುತ್ತೇನೆ.ನನ್ನ ಪ್ರಚಾರ ಶೈಲಿಯೂ ವಿಭಿನ್ನವಾಗಿದ್ದು,ನಾನು ಯಾವತ್ತೂ ಜನರ ಪರವಾಗಿ ಇರುವವನು ಎಂದು ಪ್ರಿಯಾಂಕ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಸದ್ಯ ಎಲ್ಲರ ಚಿತ್ತ ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫಿನಾಲೆ ಎಂದೇ ಬಿಂಬಿತವಾಗಿರುವತ್ತ ನೆಟ್ಟಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.