ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ದೇವಸ್ಥಾನವೆಂದರೆ ಅಲ್ಲಿ ಕೆಲವು ನಿಬಂಧನೆಗಳಿರುತ್ತವೆ.ಸೂತಕ ಹೊಂದಿರುವ ಮನೆಯವರು ಅಥವಾ ಮುಟ್ಟಾದ ಮಹಿಳೆಯರು ದೇವಸ್ಥಾನದ ಕಡೆಗೆ ಹೋಗಲೇ ಬಾರದು ಎನ್ನುವ ನಿಯಮವಿದೆ.ಅದರಲ್ಲೂ ದೇವಸ್ಥಾನದಲ್ಲಿ ಪೂಜೆ ಮಾಡೋದಕ್ಕೆ ಪುರುಷರೇ ಇರುತ್ತಾರೆ.ಆದರೆ ಇಲ್ಲೊಂದು ದೇವಸ್ಥಾನವಿದೆ.ಇಲ್ಲಿ ಪೂಜೆ ಮಾಡೋದಕ್ಕೆ ಮಹಿಳೆಯರೇ ಬೇಕು.ಮಾತ್ರವಲ್ಲ ಮುಟ್ಟಿನ ಸಂದರ್ಭದಲ್ಲಿಯೂ ಮಹಿಳೆಯರು ಇಲ್ಲಿ ದೇವರ ಪೂಜೆಯಲ್ಲಿ ನಿರತರಾಗುತ್ತಾರೆ..!
ಹೌದು.. ಇಂತಹದೊಂದು ದೇವಸ್ಥಾನ ಇರೋದು ತಮಿಳುನಾಡಿನ ವೆಲ್ಲಿಯಂಗಿರಿ ಪರ್ವತ ಪ್ರದೇಶದ ಬುಡದಲ್ಲಿ.ಇಲ್ಲಿ ಮಾಲಿಂಗ ಭೈರವಿ ಎಂಬ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಇಂಥ ಸನ್ನಿವೇಶ ಕಾಣಸಿಗುತ್ತದೆ. ಬೈರಾಗಿಣಿ ಮಾ ಎಂದೂ ಕರೆಯಲಾಗುವ ಈ ದೇವಸ್ಥಾನದಲ್ಲಿ ಮಹಿಳೆಯರು ಕೆಂಪು ಸೀರೆ ಉಟ್ಟುಕೊಂಡು ಪೂಜೆ ಮಾಡುತ್ತಾರೆ.
ಇಲ್ಲಿ ಮಹಿಳೆಯರೇ ಅರ್ಚಕರು, ಅವರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಅವರಿಗೆ ಮಾತ್ರ ಪೂಜೆಗೆ ಮಾಡಲು ಅವಕಾಶ. ಅಷ್ಟೇ ಅಲ್ಲ, ಭಕ್ತೆಯರು ಮುಟ್ಟಾಗಿದ್ದರೂ ಇಲ್ಲಿಗೆ ಬರಬಹುದು, ದೇವರ ದರ್ಶನ ಪಡಿಬಹುದು.ಅವರಿಗೆ ಯಾವ ನಿರ್ಬಂಧವೂ ಇರೋದಿಲ್ಲ.
ತಮಿಳುನಾಡಿನ ಕೊಯಮತ್ತೂರು ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಆಶ್ರಮದಲ್ಲಿ ಈ ದೇವಾಲಯ ಇದೆ.ಇಲ್ಲಿ ಪ್ರತಿನಿತ್ಯವೂ ನೂರಾರು ಭಕ್ತರು ಬಂದು ದೇವರ ದರ್ಶನ ಪಡಿತಾರೆ.ಅದರಲ್ಲೂ ಮಹಿಳೆಯರೇ ಇಲ್ಲಿ ದೇವರ ಕೃಪೆಗೆ ಪಾತ್ರರಾಗೋದು ವಿಶೇಷವಾಗಿದೆ. ಈ ದೇವಸ್ಥಾನ ಗೋಡೆಗಳಲ್ಲಿ ತಲೆಕೆಳಗಾದ ತ್ರಿಕೋನದ ರಚನೆಗಳಿದ್ದು, ಗರ್ಭದ ಸಂಕೇತ ಎನ್ನಲಾಗುತ್ತಿದೆ. ದೇವಾಲಯದ ವಿನ್ಯಾಸವು ಸ್ತ್ರೀಯ ದೇಹವನ್ನು ಪ್ರತಿನಿಧಿಸುವಂತಿದೆ.ಒಟ್ಟಿನಲ್ಲಿ ಈ ದೇಗುಲ ಹಲವು ವಿಶೇಷತೆಗಳಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ.