ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಗರ್ಭಿಣಿ ಎಂದು ಗೊತ್ತಾದಾಗ ಆರೋಗ್ಯದಲ್ಲಿ ವ್ಯತ್ಯಾಸಗಳಾಗೋದಕ್ಕೆ ಶುರುವಾಗುತ್ತದೆ.ಎರಡು ತಿಂಗಳು ಆರಂಭವಾಗುತ್ತಿದ್ದ ಹಾಗೆ ವಾಂತಿ ಕಾಣಿಸಿಕೊಳ್ಳುತ್ತದೆ.ಸುಸ್ತು ಇರುತ್ತದೆ.ಆದರೆ ಇಲ್ಲೊಬ್ಬಳು ಮಹಿಳೆಗೆ ಬಹಳ ದಿನದಿಂದ ಕಾಣಿಸಿಕೊಂಡಿದ್ದ ಹೊಟ್ಟೆ ನೋವಿನ ಸಮಸ್ಯೆಗೆಂದು ಆಸ್ಪತ್ರೆಗೆ ಹೋದಾಗ ಅಚ್ಚರಿಯೇ ಕಾದಿದೆ.
ಹೌದು,ಹೊಟ್ಟೆನೋವು ವಿಪರೀತವಾಗಿ ಕಾಣಿಸಿಕೊಂಡಾಗ ಮಹಿಳೆ ವೈದ್ಯರ ಬಳಿ ಹೋಗಿದ್ದಾಳೆ. ಈಕೆಯ ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವನ್ನು ತಿಳಿದ ವೈದ್ಯರು ಹೌಹಾರಿದ್ದಾರೆ. ದಕ್ಷಿಣ ಅಮೆರಿಕ (America ) ದ ಪೆರಾಗ್ವೆಯ ಕ್ಯಾಪಿಯಟ್ ನಗರದ ನಿವಾಸಿಯಾಗಿರುವ 33 ವರ್ಷದ ಈ ಮಹಿಳೆ ವಿಪರೀತ ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾದಳು. ತಡೆಯಲಾರದ ಹೊಟ್ಟೆನೋವಿನಿಂದಾಗಿ ಈಕೆ ಪ್ರಜ್ಞೆಯನ್ನೂ ಕಳೆದುಕೊಂಡಳು. ತಕ್ಷಣ ವೈದ್ಯರು ಈಕೆಯ ತಪಾಸಣೆ ನಡೆಸಿದಾಗ ಈ ಮಹಿಳೆ ಗರ್ಭವತಿಯಾಗಿರುವುದು ತಿಳಿದು ಬಂದಿದೆ.
ಗರ್ಭವತಿಯಾದ ಮಹಿಳೆಗೆ ಆಗಲೇ ಹೆರಿಗೆ ನೋವು (Labour Pain) ಆರಂಭವಾಗಿತ್ತು. ಹೆರಿಗೆನೋವಿನ ಜೊತೆಗೆ ಆಕೆಗೆ ವಿಪರೀತ ರಕ್ತಸ್ರಾವವೂ ಆಗುತ್ತಿತ್ತು. ಮೊದಲು ಆಕೆಯನ್ನು ನಗರದ ಹೆರಿಗೆ ಆಸ್ಪತ್ರೆಗೆ ಕಳುಹಿಸಲು ತೀರ್ಮಾನಿಸಿದ್ದ ವೈದ್ಯರು ಆಕೆಯ ಗಂಭೀರ ಸ್ಥಿತಿಯನ್ನು ನೋಡಿ, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದು ಎಚ್ಚೆತ್ತರು. ತಕ್ಷಣವೇ ಆಕೆಯ ಹೆರಿಗೆ ಮಾಡಿಸಿದರು. 33 ವರ್ಷದ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದಳು. ಹುಟ್ಟಿದ ಮಗುವಿನ ತೂಕ 3 ಕೆಜಿ ಇತ್ತು. ಈಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.
ಹೆಣ್ಣು ಮಗುವನ್ನು ಹೊಂದಿದ ಈ ಮಹಿಳೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ ಈ ಮೂರನೇ ಮಗು ಆಗುವ ವೇಳೆ ಆಕೆಗೆ ತಾನು ಗರ್ಭವತಿಯೆನ್ನುವುದೇ ತಿಳಿದಿರಲಿಲ್ಲ. ಆಕೆ ಯಾವುದೇ ರೀತಿಯ ವೈದ್ಯಕೀಯ ತಪಾಸಣೆಯನ್ನು ಕೂಡ ಮಾಡಿಸಿಕೊಂಡಿರಲಿಲ್ಲ. ಆಕೆಯಲ್ಲಿ ಯಾವುದೇ ರೀತಿಯ ದೈಹಿಕ ಬದಲಾವಣೆಗಳು ಆಗಿರಲಿಲ್ಲವಾ ಅಥವಾ ಆಕೆ ಅದನ್ನು ಗಮನಿಸಲಿಲ್ಲವಾ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸ್ವತಃ ವೈದ್ಯರೇ ಈ ಸಂಗತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಯಾಕೆಂದರೆ ಗರ್ಭಿಣಿ ಅಂದಾಕ್ಷಣ ಮುಟ್ಟಿನ ಪ್ರಕ್ರಿಯೆ ನಿಂತು ಬಿಡುತ್ತದೆ.ದೇಹದಲ್ಲಿ ವ್ಯತ್ಯಾಸಗಳಾಗುತ್ತದೆ.ಆದರೆ ಬರೋಬ್ಬರಿ ೯ ತಿಂಗಳ ಕಾಲ ಹೊಟ್ಟೆಯಲ್ಲಿ ಮಗುವಿದ್ದರೂ ಈ ಮಹಿಳೆಗೆ ತಾನು ಗರ್ಭಧರಿಸಿರುವ ಸಂಗತಿ ಹೇಗೆ ತಿಳಿಯಲಿಲ್ಲ ಅನ್ನೋದೇ ಅಚ್ಚರಿಯ ವಿಷಯವಾಗಿದೆ. ಆಕೆಗೆ ಮುಟ್ಟಿನ ಸಮಸ್ಯೆಯೂ ಎದುರಾಗಲಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ಮಹಿಳೆ ತನ್ನ ಆರೋಗ್ಯದ ಮೇಲೆ ಕಾಳಜಿ ವಹಿಸದೇ ಇರುವುದೇ ಇದಕ್ಕೆಲ್ಲ ಕಾರಣ ಎಂದು ಕೆಲವು ವೈದ್ಯರು ಹೇಳಿದ್ದಾರೆ. ಹೀಗೆ ಆರೋಗ್ಯದ ಸಮಸ್ಯೆ ವಿಪರೀತವಾದ ಮೇಲೆ ಆಸ್ಪತ್ರೆಗೆ ದಾಖಲಾಗುವ ಬದಲು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದರಿಂದ ಹತ್ತು ಹಲವು ಸಮಸ್ಯೆಗಳಿಂದ ದೂರವಿರಬಹುದು.