ನ್ಯೂಸ್ ನಾಟೌಟ್: ವರ್ತೂರು ಸಂತೋಷ್ ಬಂಧನ ಬಳಿಕ ‘ಹುಲಿ ಉಗುರು’ ಪ್ರಕರಣ ರಾಜ್ಯದಲ್ಲಿ ಸುದ್ದಿ ಮಾಡುತ್ತಿದೆ. ಇದೀಗ ಈ ಪ್ರಕರಣದಲ್ಲಿ ಹಲವರಿಗೆ ಸಂಕಷ್ಟ ಎದುರಾಗಿದೆ.
ಇದೀಗ ಅರಣ್ಯಾಧಿಕಾರಿಗಳ ವಿರುದ್ಧವೇ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅಸಮಾಧಾನ ಹೊರಹಾಕಿದ್ದಾರೆ. ಹುಲಿ ಉಗುರು (Tiger Claws) ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ಬಂಧನ ಸರಿಯಲ್ಲ. ರಾಜ್ಯ ಸರ್ಕಾರ (Karnataka Government) ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಏಕಾಏಕಿ ದಾಳಿ ನಡೆಸಿ ಬಂಧನ ಮಾಡುವುದು ಸರಿಯಾದ ಕ್ರಮ ಅಲ್ಲ ಎಮದು ಆಕ್ರೋಶ ಹೊರಹಾಕಿದ್ದಾರೆ.
ವನ್ಯಜೀವಿ ರಕ್ಷಣಾ ಕಾಯ್ದೆ ಬರುವ ಮೊದಲು ಹುಲಿ ಉಗುರು, ವನ್ಯ ಪ್ರಾಣಿಗಳ ವಸ್ತುಗಳು ಮಲೆನಾಡು, ಕರಾವಳಿ ಭಾಗದಲ್ಲಿ ಅಲಂಕಾರಿಕ ವಸ್ತುವಾಗಿತ್ತು. ಮಕ್ಕಳಿಗೆ ಹುಲಿ ಉಗುರು ತೊಡಿಸುತ್ತಿದ್ದರು. ಏಕಾಏಕಿ ವ್ಯಕ್ತಿಗಳನ್ನು ಬಂಧನ ಮಾಡಿದರೆ ಜೈಲುಗಳಲ್ಲಿ ಸ್ಥಳ ಸಾಕಾಗುವುದಿಲ್ಲ ಎಂದು ಹೇಳಿದರು.
ನೂರಾರು ವರ್ಷಗಳಿಂದ ಇಂತಹ ವಸ್ತುಗಳ ಸಂಗ್ರಹ ಇದೆ. ಹಾಗೆ ಸಂಗ್ರಹಿಸಿಟ್ಟವರನ್ನೆಲ್ಲ ಬಂಧಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ವನ್ಯಜೀವಿ ರಕ್ಷಣಾ ಕಾಯ್ದೆಗೆ ನಾನು ವಿರೋಧಿ ಅಲ್ಲ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಉಗುರು ಇಟ್ಟಿರುವವರನ್ನೆಲ್ಲ ಬಂಧಿಸುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಚರ್ಚೆ ನಡೆಸಬೇಕು ಎಂದು ಜ್ಞಾನೇಂದ್ರ ಆಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.