ನ್ಯೂಸ್ ನಾಟೌಟ್: ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಖತರ್ ನಲ್ಲಿ ಮರ* ಣದಂಡನೆ ಶಿಕ್ಷೆ ಘೋಷಿಸಲಾಗಿದೆ. ಈ ತೀರ್ಪನ್ನು ಆಘಾತಕಾರಿ ಎಂದು ಬಣ್ಣಿಸಿರುವ ಭಾರತದ ವಿದೇಶಾಂಗ ಸಚಿವಾಲಯ ಈ ಪ್ರಕರಣದ ವಿಚಾರಣೆಯ ಗೌಪ್ಯತೆಗೆ ಸಂಬಂಧಿಸಿದಂತೆ ತಾನು ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಹೇಳಿದರೂ ಈ ತೀರ್ಪನ್ನು ಪ್ರಶ್ನಿಸುವುದಾಗಿ ತಿಳಿಸಿದೆ.
ಇಸ್ರೇಲ್ ಗಾಗಿ ಗೂಢಚರ್ಯೆ ನಡೆಸಿದ್ದಾರೆಂಬ ಆರೋಪಗಳನ್ನು ಹೊತ್ತು ಶಿಕ್ಷೆ ಘೋಷಿಸಿಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ಇವರ ಮೇಲೆ ಇರುವ ಆರೋಪಗಳು ಏನು ಅನ್ನೋದ್ರ ಬಗ್ಗೆ ಭಾರತ ಸರ್ಕಾರ ಈವರೆಗೂ ಏನನ್ನೂ ಹೇಳಿಲ್ಲ. ಜೊತೆಗೆ ಕತಾರ್ ನ್ಯಾಯಾಲಯ ಕೂಡಾ ತನ್ನ ತೀರ್ಪಿನಲ್ಲಿ ಈ ಕುರಿತು ವಿವರಿಸಿಲ್ಲ. ಶಿಕ್ಷೆ ವಿಧಿಸಲ್ಪಟ್ಟಿರುವ ಮಾಜಿ ನೌಕಾಪಡೆಯ ಅಧಿಕಾರಿಗಳು ಉನ್ನತ ಹುದ್ದೆಯನ್ನು ಹಿಂದೆ ಹೊಂದಿದ್ದರು ಹಾಗೂ ಪ್ರಸ್ತುತ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಎಂಡ್ ಕನ್ಸಲ್ಟೆನ್ಸಿ ಸರ್ವಿಸಸ್ ಗೆ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಖತರ್ ಸೇನಾ ಪಡೆಗಳಿಗೆ ತರಬೇತಿ ಮತ್ತಿತರ ಸೇವೆಗಳನ್ನು ಈ ಖಾಸಗಿ ಸಂಸ್ಥೆ ಒದಗಿಸುತ್ತಿದೆ. ಈ ಎಂಟು ಮಂದಿಯಲ್ಲಿ ಕೆಲವರು ಅತಿ ಸೂಕ್ಷ್ಮವೆಂದು ತಿಳಿಯಲಾದ ಖತರ್ ಸಬಮೆರೈನ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು.
ಎಂಟು ಮಂದಿಯೂ ಆಗಸ್ಟ್ 2022ರಿಂದ ಜೈಲಿನಲ್ಲಿದ್ದು. ಅವರ ಬಿಡುಗಡೆಗಾಗಿ ಭಾರತ ಸರ್ಕಾರ ಶ್ರಮಿಸುತ್ತಿತ್ತು. ಈ ಮಾರ್ಚ್ ತಿಂಗಳಲ್ಲಿ ಅವರ ವಿಚಾರಣೆ ನಡೆದಿತ್ತು ಎನ್ನಲಾಗಿದೆ.
ಅವರ ಜಾಮೀನು ಅರ್ಜಿಗಳು ಹಲವು ಬಾರಿ ತಿರಸ್ಕೃತಗೊಂಡಿದ್ದವು ಹಾಗೂ ಅವರ ಬಂಧನ ಅವಧಿ ವಿಸ್ತರಣೆಗೊಂಡಿತ್ತು. ಇಂದು ಖತರ್ ನ ಕೋರ್ಟ್ ಆಫ್ ಫಸ್ಸ್ ಇನ್ಸ್ಟೆನ್ಸ್ ತೀರ್ಪು ಪ್ರಕಟಿಸಿ ಮರ* ಣದಂಡನೆ ಘೋಷಿಸಿದೆ.
ದೋಷಿಗಳೆಂದು ಘೋಷಿತರಾದವರು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬಿರೇಂದ್ರ ಕುಮಾರ್ ವರ್ಮ, ಕ್ಯಾಪ್ಟನ್ ಸೌರಭ್ ವಸಿಷ್ಠ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಕರ್ ಪಕಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಎಂದು ಗುರುತಿಲಾಗಿದೆ.
“ತೀರ್ಪಿನಿಂದ ಆಘಾತವಾಗಿದೆ ಹಾಗೂ ತೀರ್ಪಿನ ವಿಸ್ತೃತ ಪ್ರತಿಗಾಗಿ ಕಾಯಲಾಗುತ್ತಿದೆ.
ಶಿಕ್ಷೆ ವಿಧಿಸಲ್ಪಟ್ಟವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಹಾಗೂ ಕಾನೂನು ಹೋರಾಟದ ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತಿದ್ದೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಾಮರ್ಶಿಸಲಾಗುತ್ತಿದೆ,” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಖತರ್ ಅಧಿಕಾರಿಗಳೊಂದಿಗೂ ಚರ್ಚಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ ಎನ್ನಲಾಗಿದೆ.