ನ್ಯೂಸ್ ನಾಟೌಟ್: ಬಿಗ್ ಬಾಸ್ (Big Boss) ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಕೊರಳಲ್ಲೂ ಹುಲಿ ಉಗುರು (Tiger claw) ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ಅವರ ಕಚೇರಿ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದ್ದು, ಹುಲಿ ಉಗುರನ್ನು ವಶ ಪಡಿಸಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲೇ ವರ್ತೂರ್ ಸಂತೋಷ್ ಬಂಧನವಾಗಿತ್ತು. ಈ ಬೆನ್ನಲ್ಲೆ ಹಲವು ದಾಳಿಗಳು ನಡೆಯುತ್ತಿರೋದು ವಿಶೇಷ.
ಆರ್ಯವರ್ಧನ್ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಆ ಸಮಯದಲ್ಲೇ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು. ಈಗ ಅದನ್ನು ಪತ್ತೆ ಹಚ್ಚಲಾಗಿದೆ. ಆರ್ಯವರ್ಧನ್ ಕಚೇರಿಗೆ ಆಗಮಿಸಿರುವ ಅರಣ್ಯಾಧಿಕಾರಿಗಳು, ನೋಟಿಸ್ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರ್ಯವರ್ಧನ್ ಕುತ್ತಿಗೆಯಲ್ಲಿ ಹುಲಿಯುಗುರು ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ಇದೀಗ ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಕೊರಳಲ್ಲೂ ಹುಲಿ ಉಂಗುರ ಧರಿಸಿರುವ ಫೋಟೊಗಳು ಇದೀಗ ಭಾರೀ ವೈರಲ್ ಆಗುತ್ತಿವೆ.
ಆರ್ಯವರ್ಧನ್ ಗುರುಜಿಯದ್ದು ಚಿನ್ನದ ಪೆಂಡೆಂಟ್ ಆಗಿರುವ ಕಾರಣದಿಂದಾಗಿ ಅರಣ್ಯಾಧಿಕಾರಿಗಳು ಅದನ್ನು ಚಿನ್ನದಂಗಡಿಗೆ ತೆಗೆದುಕೊಂಡು ಹೋಗಿದ್ದಾರೆ. ಪೆಂಡೆಂಟ್ ಜೊತೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashant Sambaragi) ಕೂಡ ಹೋಗಿದ್ದಾರೆ. ಹುಲಿ ಉಗುರನ್ನು ಮಾತ್ರ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಇದು ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಚೈನಾಗಿದೆ ಎನ್ನುವ ಮಾಹಿತಿ ಇದೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಈ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರ ಸ್ವಾಮಿ, ವಿನಯ್ ಗುರೂಜಿ ಸೇರಿದಂತೆ ಹಲವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ನೋಟಿಸ್ ನೀಡಲು ಮುಂದಾದರು. ಇದೀಗ ಬಹುತೇಕ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ.