ಸುಳ್ಯ: ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡಬೇಡಿ ಎಂದು ಸರಕಾರ ಎಷ್ಟೇ ಹೇಳಿದರೂ ಪೋಷಕರು ಮಾತ್ರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಮಕ್ಕಳ ಕೈಗೆ ವಾಹನ ಕೊಟ್ಟು ಭಾರಿ ಅಪಾಯಕ್ಕೆ ಪೋಷಕರೇ ದೂಡುತ್ತಿರುವುದು ವಿಪರ್ಯಾಸವೇ ಸರಿ. ಇಲ್ಲೊಬ್ಬ ಅಪ್ಪ ಮಗನಿಗೆ ಬೈಕ್ ಕೀ ಕೊಟ್ಟು ನ್ಯಾಯಾಲಯದಿಂದ ಭಾರಿ ದಂಡಕ್ಕೆ ಗುರಿಯಾಗಿ ಈಗ ಮಂಡೆ ಬೆಚ್ಚ ಮಾಡಿಕೊಂಡು ಕುಳಿತಿದ್ದಾರೆ.
ಏನಿದು ಘಟನೆ?
ಸುಳ್ಯ ತಾಲೂಕಿನ ದೇವಚಳ್ಳದ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸಿ ಸಿಕ್ಕಿ ಬಿದ್ದಿದ್ದಾನೆ. ಈತ ದೇವಚಳ್ಳ ಗ್ರಾಮದ ಅಪ್ಪಯ್ಯ ಗೌಡರವರ ಮಗ ಸುರೇಶ ಎಂದು ಹೇಳಲಾಗಿದೆ. ಅಪ್ಪಯ್ಯ ಗೌಡರು ತನ್ನ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ್ದರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಶನಿವಾರ ಬಾಲಕನ ತಂದೆ ಸುರೇಶ ಅವರಿಗೆ ರೂ.10,000/- ದಂಡ ವಿಧಿಸಿದೆ. ಪೋಷಕರು ಈ ನಿಟ್ಟಿನಲ್ಲಿ ಜಾಗರೂಕರಾಗಬೇಕಿದೆ. ಅಪ್ರಾಪ್ತರ ಕೈಗೆ ವಾಹನ ಸಿಗದಂತೆ ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಭಾರಿ ಅನಾಹುತ ಅಥವಾ ದಂಡಕ್ಕೆ ಬೆಲೆ ತೆರಬೇಕಾಗುತ್ತದೆ ಎಚ್ಚರವಾಗಿರಿ.