ನ್ಯೂಸ್ ನಾಟೌಟ್: ಸುಳ್ಯದ ಕೊಡಿಯಾಲಬೈಲ್ ನ ಮಲ್ನಾಡ್ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಾಳೆ(ಅ.26, 27)ಯಿಂದ ಶಾಲಾ ಮಕ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕ್ರೀಡಾ ಹಬ್ಬ ಅದ್ದೂರಿಯಾಗಿ ಆರಂಭಗೊಳ್ಳಲಿದೆ.
ಸಂಪೂರ್ಣ ಸಿದ್ಧಗೊಂಡಿರುವ ಕ್ರೀಡಾಂಗಣದಲ್ಲಿ ಅಂತಿಮ ಹಂತದ ತಯಾರಿಗಳು ನಡೆಯುತ್ತಿದೆ. ಕ್ರೀಡಾಕೂಟ ವೀಕ್ಷಣೆಗೆ ಸಾಕಷ್ಟು ಜನ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸರ್ವ ರೀತಿಯ ಸಿದ್ಧತೆಗಳನ್ನು ಸಂಘಟಕರು ಮಾಡಿಕೊಂಡಿದ್ದಾರೆ.
- 900 ಮಕ್ಕಳು ಭಾಗವಹಿಸುವ ನಿರೀಕ್ಷೆ
- 80 ಜನ ತೀರ್ಪುಗಾರರು
- 5 ವಲಯದ ಸುಳ್ಯ ತಾಲೂಕಿನ 74 ಶಾಲೆಗಳ ಭಾಗವಹಿಸುವಿಕೆ
- 21 ಸಮಿತಿಗಳ ರಚನೆ
ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ
ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ವಿಜೇತರಿಗೆ ನೀಡಲಾಗುತ್ತದೆ. ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ವೈಯಕ್ತಿಕ ವಿಭಾಗದಲ್ಲಿ ಸರ್ವ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಗುತ್ತದೆ. ಒಟ್ಟಾರೆ 10 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕುಮಾರಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆವಹಿಸಲಿದ್ದಾರೆ.
ಕ್ರೀಡಾಕೂಟದ ಪ್ರಯುಕ್ತ ಬುಧವಾರ ಬ್ಯಾಂಡ್, ವಾದ್ಯದ ಮೂಲಕ ಸೈಂಟ್ ಬ್ರಿಜಿಡ್ ಶಾಲೆಯಿಂದ ಜೋಸೆಫ್ ಶಾಲೆಗೆ ಹಸಿರು ಕಾಣಿಕೆ ತರಲಾಯಿತು. ಅದನ್ನು ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತಲುಪಿಸಲಾಯಿತು. ಈ ವೇಳೆ ಚರ್ಚ್ ಧರ್ಮಗುರುಗಳಾದ ರೆ|ಫಾ ವಿಕ್ಟರ್ ಡಿಸೋಜಾ, ಪಾಲನಾ ಪರಿಷತ್ ಸೈಂಟ್ ಬ್ರಿಜಿಡ್ಸ್ ಚರ್ಚ್ ಸುಳ್ಯ ಇದರ ಉಪಾಧ್ಯಕ್ಷ ನವೀನ್ ಮಚಾದೋ, ಸಿಸ್ಟರ್ ಗಳಾದ ಮೇರಿ, ಕ್ರೇಸಿ, ಮಿಥಿಲ್ಲ ಶಾಲಾ ಶಿಕ್ಷಕರು, ಆಡಳಿತ ಸಿಬ್ಬಂದಿ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.
ಕ್ರೀಡಾಕೂಟವು ದ.ಕ. ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸುಳ್ಯ ಮತ್ತು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಜ್ ಅನುದಾನಿತ ಹಿ.ಪ್ರಾ.ಶಾಲೆ ಸುಳ್ಯ ಸಹಯೋಗದಲ್ಲಿ ನಡೆಯಲಿದೆ.