ನ್ಯೂಸ್ ನಾಟೌಟ್: ಸರ್ಕಾರಿ ಶಾಲೆ ಬಹುತೇಕ ಬಡವರ ಮಕ್ಕಳು ಓದುವ ಶಾಲೆ. ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿ ಅದೆಷ್ಟೋ ಮಂದಿ ಭವಿಷ್ಯದಲ್ಲಿ ದೊಡ್ಡ ಸಾಧಕರಾಗಿದ್ದಾರೆ. ಅಂತಹ ಸಾಧಕರನ್ನು ನಿರ್ಮಿಸಿದ ಕನ್ನಡ ಶಾಲೆಯೊಂದಕ್ಕೆ ನುಗ್ಗಿದ ಕಿಡಿಗೇಡಿಗಳು ಶಾಲೆಯ ಪೀಠೋಪಕರಣಗಳನ್ನು ಪುಡಿಗೈದಿರುವ ಘಟನೆ ಪೈಂಬೆಚ್ಚಾಲು ಸರ್ಕಾರಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.
ಅಪರಿಚಿತ ಕಿಡಿಗೇಡಿಗಳು ಕಚೇರಿಯ ಕಿಟಕಿ ಮೂಲಕ ಸಲಾಕೆ ಇನ್ನಿತರ ವಸ್ತುಗಳಿಂದ ಕಚೇರಿಯಲ್ಲಿರುವ ಸಾಮಾಗ್ರಿಗಳನ್ನು ಹಾನಿಗೊಳಿಸಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದ ಕಚೇರಿಯಲ್ಲಿದ್ದ ಪುಸ್ತಕಗಳು, ಮೇಜು ಮುಂತಾದ ಸಾಮಗ್ರಿಗಳಿಗೆ ತೀವ್ರ ಹಾನಿಯಾಗಿದೆ.
ಈ ಬಗ್ಗೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅವರು ಸ್ಥಳಕ್ಕಾಗಮಿಸುವ ನಿರೀಕ್ಷೆ ಇದೆ. ವಿಷಯ ತಿಳಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಕೋಲ್ಟಾರ್, ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.