ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬನ ಬಾಯಲ್ಲಿ ಬಾಂಬ್ ಸಿಡಿದು ಆತ ಕೊನೆಯುಸಿರೆಳೆದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಕುಡಿತದ ಅಮಲಿಗೆ 35 ವರ್ಷದ ವ್ಯಕ್ತಿ, ಆಕಸ್ಮಿಕವಾಗಿ ದೇಶೀಯ ನಿರ್ಮಿತ ಬಾಂಬ್ ಕಚ್ಚಿ ಸಿಡಿದ ಪರಿಣಾಮ ಕೊನೆಯುಸಿರೆಳೆದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ ಮತ್ತು ತಡವಾಗಿ ಬೆಳಕಿಗೆ ಬಂದಿದೆ.
ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಬಂಗಾರು ಪಾಳ್ಯಂ ಮಂಡಲದ ಗಡ್ಡಂವರಿ ಪಲ್ಲಿ ಅನ್ನೋ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.
ಈ ಪ್ರಕರಣದ ಕುರಿತಾಗಿ ಬಂಗಾರು ಪಾಳ್ಯಂ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜು ರಾವ್ ಅವರ ಸಾರಥ್ಯದ ತಂಡ ತನಿಖೆ ನಡೆಸುತ್ತಿದ್ದು, ಗಡ್ಡಂವರಿ ಪಲ್ಲಿ ಗ್ರಾಮದ ನಿವಾಸಿ ಎಂ. ಚಿರಂಜೀವಿ ಎಂದು ವ್ಯಕ್ತಿಯನ್ನು ಗುರುತಿಸಲಾಗಿದೆ.
ಮೃತ ಚಿರಂಜೀವಿ ಜೊತೆ ಆತನ ಹೆಂಡತಿ ಜಗಳ ಆಡಿ ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಹೀಗಾಗಿ, ಚಿರಂಜೀವಿ ಕುಡಿತದ ಚಟಕ್ಕೆ ಒಳಗಾಗಿದ್ದ. ಪ್ರತಿ ದಿನ ವಿಪರೀತ ಕುಡಿದು ಮನೆಗೆ ಬರುತ್ತಿದ್ದ ಕಾರಣಕ್ಕೇ ಆತನ ಪತ್ನಿ ಮನೆ ಬಿಟ್ಟು ಹೋಗಿದ್ದಳು ಎಂದು ಗ್ರಾಮಸ್ಥರು ತಿಳಿಸಿದ್ಧಾರೆ.
ಎಂದಿನಂತೆ ಪ್ರತಿ ದಿನ ಸಂಜೆ ವಿಪರೀತ ಕುಡಿಯುತ್ತಿದ್ದ ಚಿರಂಜೀವಿಗೆ ಆ ದಿನ ಹೊಟ್ಟೆ ಹಸಿವಾಗಿತ್ತು. ಕುಡಿದ ಅಮಲಿನಲ್ಲಿ ಆತನ ಕೈಗೆ ಏನೂ ಸಿಕ್ಕಿರಲಿಲ್ಲ. ಗ್ರಾಮದಲ್ಲಿ ಆತನಿಗೆ ಕಚ್ಚಾ ಬಾಂಬ್ ಒಂದು ಸಿಕ್ಕಿತು. ಅದನ್ನು ತಿನ್ನುವ ವಸ್ತು ಎಂದು ಭಾವಿಸಿ ಅಮಲಿನಲ್ಲಿ ಬಾಂಬ್ ಅನ್ನು ಕಡಿದಿದ್ದಾನೆ. ಹೀಗಾಗಿ, ಬಾಂಬ್ ಆತನ ಬಾಯಿಯಲ್ಲೇ ಸ್ಫೋಟಗೊಂಡಿದೆ.
ಇದರ ಪರಿಣಾಮವಾಗಿ ಚಿರಂಜೀವಿಯ ಕೊನೆಯುಸಿರೆಳೆದಿದ್ದು, ಗ್ರಾಮದಲ್ಲಿ ಭಾರೀ ಸ್ಪೋಟದ ಸದ್ದು ಕೇಳಿದ್ದೇ ತಡ ಗ್ರಾಮಸ್ಥರು ಚಿರಂಜೀವಿ ಮನೆಯತ್ತ ದೌಡಾಯಿಸಿದ್ದಾರೆ. ಆರಂಭದಲ್ಲಿ ಆತನಿಗೆ ಏನಾಯ್ತು ಎಂದು ಜನರಿಗೆ ಅರಿವಾಗಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತನನ್ನು ಬಂಗಾರು ಪಾಳ್ಯಂ ಆಸ್ಪತ್ರೆಗೆ ಕರೆದೊಯ್ಯವ ವೇಳೆಗಾಗಲೇ ಆತ ಅಸುನೀಗಿದ್ದ ಎಂದು ವೈದ್ಯರು ಘೋಷಿಸಿದ್ದಾರೆ.