ನ್ಯೂಸ್ ನಾಟೌಟ್: ಕ್ಯಾಂಟಿನ್ ನಡೆಸುತ್ತಿದ್ದ ಬಡಪಾಯಿಯ ಟಚ್ ಸ್ಕ್ರೀನ್ ಮೊಬೈಲ್ ಫೋನ್ ಅನ್ನು ಕಳ್ಳನೊಬ್ಬ ಎಗರಿಸಿ ಬಂಟ್ವಾಳದಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆ ಖತರ್ನಾಕ್ ಮೊಬೈಲ್ ಕಳ್ಳನನ್ನು ಹಿಡಿಯಲು ಸಾಧ್ಯವಾಗದಿದ್ದರೂ ಕದ್ದು ಹೋಗಿದ್ದ ಮೊಬೈಲ್ ಫೋನ್ ಅನ್ನು ವಾಪಸ್ ವಾರಿಸುದಾರರಿಗೆ ತಂದುಕೊಡುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಣೆಯಾದ ದಿನದಿಂದ ಬರೋಬ್ಬರಿ 14 ದಿನಗಳ ಬಳಿಕ ಮೊಬೈಲ್ ಪತ್ತೆಯಾಗಿರೋದು ವಿಶೇಷವಾಗಿದೆ.
ಜಗಾನಂದ ಅನ್ನುವ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಡಪಾಲ ಎಂಬಲ್ಲಿ ಕಾರ್ತಿಕೇಯ ಅನ್ನುವ ಹೆಸರಿನಲ್ಲಿ ಕ್ಯಾಂಟಿನ್ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಕ್ಯಾಂಟಿನ್ ಗೆ ಪ್ರತಿನಿತ್ಯ ಹತ್ತಾರು ಮಂದಿ ಗ್ರಾಹಕರು ಬರುತ್ತಿರುತ್ತಾರೆ. ಅಂತೆಯೇ ಜಗಾನಂದ ಅವರು ಅಕ್ಟೋಬರ್ 11ರಂದು ಎಂದಿನಂತೆ ರಾತ್ರಿ 8ಗಂಟೆಗೆ ಕೆಲಸದಲ್ಲಿದ್ದ ಹೊತ್ತಿನಲ್ಲಿ ಗ್ರಾಹಕನ ವೇಷದಲ್ಲಿ ಕಳ್ಳನೊಬ್ಬ ಬಂದಿದ್ದಾನೆ.
ಇದು ಜಗಾನಂದ ಅವರ ಗಮನಕ್ಕೆ ಬಂದಿರುವುದಿಲ್ಲ. ಜಗಾನಂದ ಅವರು ಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಸಮಯ ನೋಡಿಕೊಂಡು ಆತ ಅವರ 10,000 ರೂ. ಬೆಲೆಯುಳ್ಳ ರೆಡ್ ಮಿ ೯ಎ ಮೊಬೈಲ್ ಫೋನ್ ಅನ್ನು ಎಗರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಜಗಾನಂದ ಅವರು ತಮ್ಮ ಕೆಲಸ ಮುಗಿಸಿ ಮೊಬೈಲ್ ಹುಡುಕಿದಾಗ ಎಲ್ಲಿಯೂ ಸಿಗುವುದಿಲ್ಲ. ತಕ್ಷಣ ಅವರು ಕಲ್ಲುಗುಂಡಿ ಪೊಲೀಸರಿಗೆ ದೂರು ನೀಡುತ್ತಾರೆ. ಕಲ್ಲುಗುಂಡಿ ಪೊಲೀಸರು ಸುಳ್ಯ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದರಿಂದ ಸುಳ್ಯಕ್ಕೆ ಬಂದು ಜಗಾನಂದ ದೂರು ನೀಡುತ್ತಾರೆ. ಈ ಪ್ರಕಾರವಾಗಿ ದೂರು ದಾಖಲಾದ ಬಳಿಕ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮನೆಯವರು ದೈವ ದೇವರಿಗೆ ಹರಿಕೆಯನ್ನೂ ಹೊತ್ತುಕೊಂಡಿದ್ದಾರೆ.
ಇದಾದ ಬಳಿಕ ಫೋನ್ ಲೊಕೇಷನ್ ಟ್ರೇಸ್ ಮಾಡಿದಾಗ ಅದು ಬಂಟ್ವಾಳದ ಮೊಬೈಲ್ ಅಂಗಡಿಯೊಂದರಲ್ಲಿ ಫೋನ್ ಇರುವುದು ಪತ್ತೆಯಾಗಿದೆ. ಸೂಕ್ತ ತನಿಖೆ ನಡೆಸಿ ಅಲ್ಲಿಗೆ ಹೋಗಿ ಅದನ್ನು ವಾಪಸ್ ತಂದುಕೊಡುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 24ರಂದು ಸುಳ್ಯ ಎಸ್ ಐ ಈರಯ್ಯ ದೊಂತೂರು ಮೊಬೈಲ್ ಅನ್ನು ಜಗಾನಂದ ಅವರಿಗೆ ಹಸ್ತಾಂತರಿಸಿದ್ದಾರೆ.
ಇದೀಗ ಮೊಬೈಲ್ ಹುಡುಕಿಕೊಟ್ಟ ಇಡೀ ಪೊಲೀಸರಿಗೆ ಜಗಾನಂದ ಕುಟುಂಬ ಧನ್ಯವಾದಗಳನ್ನು ನ್ಯೂಸ್ ನಾಟೌಟ್ ಮೂಲಕ ತಿಳಿಸಿದೆ. ಸಣ್ಣ ಕೇಸನ್ನೂ ಕೂಡ ದೊಡ್ಡ ರೀತಿಯಲ್ಲಿ ಗಂಭೀರವಾಗಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.