ನ್ಯೂಸ್ನಾಟೌಟ್: ಮಂಗಳೂರು – ಉಡುಪಿಯಲ್ಲಿ ದಸರಾ ವೇಳೆ ನಡೆಯುವ ಹುಲಿಕುಣಿತ ಸಾಕಷ್ಟು ದೇಹ ದಂಡಿಸಿ ಪರಿಶ್ರಮ ಪಟ್ಟು ನಾನಾ ರೀತಿಯ ಸರ್ಕಸ್ ಗಳ ಮೂಲಕ ದೇವರ ಭಕ್ತಿಯ ಜೊತೆ ಜನರಿಗೆ ಮನೋರಂಜನೆ ನೀಡಲಾಗುತ್ತದೆ. ಇಂತಹ ಹುಲಿವೇಷ ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ಆಯ ತಪ್ಪಿ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ನಡೆದಿದೆ.
ದೇವರ ಎದುರು ಹುಲಿವೇಷ ಧರಿಸಿ ಪ್ರದರ್ಶನದ ವೇಳೆ ಘಟನೆ ನಡೆದಿದ್ದು, ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ದುರ್ಘಟನೆ ನಡೆದಿದೆ. ಹುಲಿವೇಷಧಾರಿಯೊಬ್ಬರು ಕಸರತ್ತು ಪ್ರದರ್ಶನದ ವೇಳೆ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ಅನಾಹುತ ನಡೆದಿದೆ.
ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಹುಲಿವೇಷಧಾರಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ.
ಸದ್ಯ ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಯುವಕ ಪಾರಾಗಿದ್ದಾನೆ. ನಿರಂತರ ಅಭ್ಯಾಸದ ಜೊತೆಗೆ ಹಲವು ವರ್ಷಗಳಿಂದ ಹುಲಿವೇಷ ಕಸರತ್ತು ನಡೆಸಲಾಗುತ್ತದೆ.
ಹರಕೆಯ ಕಾರಣಕ್ಕೆ ಮಂಗಳಾದೇವಿ ದೇವರ ಎದುರು ಕಸರತ್ತು ನಡೆಸುವುದು ಹಾಗೂ ನವರಾತ್ರಿ ಹಿನ್ನೆಲೆ ಹುಲಿವೇಷ ಧರಿಸಿ ಕುಣಿತ ಮತ್ತು ಕಸರತ್ತು ಪ್ರದರ್ಶಿಸುವ ಸಂಪ್ರದಾಯ ಇದೆ.
ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿದರೆ ದೇವಿಗೆ ಸಂತಸವಾಗುತ್ತದೆ ಹಾಗೂ ದೇವಿಯೂ ಪ್ರಸನ್ನಳಾಗಿ ಹರಸುತ್ತಾಳೆ ಎಂಬ ನಂಬಿಕೆ ಕರಾವಳಿಗರದ್ದು. ಆ ಕಾರಣಕ್ಕಾಗಿಯೇ ಪ್ರತಿ ವರ್ಷ ನೂರಾರು ಮಂದಿ ಹರಕೆ ಹೊತ್ತು ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿಯುತ್ತಾರೆ.