ನ್ಯೂಸ್ ನಾಟೌಟ್ : ಹುಟ್ಟಿದ ಮಗುವಿಗೆ ‘ಕಾಂಗರೂ’ ಪುನರ್ಜನ್ಮ ನೀಡಿದೆ.ಮಗು ಜನಿಸುವ ವೇಳೆ ಕೇವಲ 500 ಗ್ರಾಂ.ತೂಕವಿದ್ದ ಮಗುವಿನ ತೂಕ ನೋಡಿ ವೈದ್ಯರೇ ಕಳವಳ ವ್ಯಕ್ತ ಪಡಿಸಿದ್ದರು.ಆದರೂ ವೈದ್ಯರ ಶ್ರಮ ಹಾಗೂ ನಿಷ್ಠೆಗೆ ಪ್ರತಿಫಲವಾಗಿ ಆ ಮಗು ಈಗ ಚೇತರಿಸಿಕೊಂಡಿದೆ..!
ಇಂತಹ ಅಪರೂಪದ ಘಟನೆ ನಡೆದಿದ್ದು,ಕೊಪ್ಪಳ ಜಿಲ್ಲೆಯಲ್ಲಿ. ಅವಧಿಪೂರ್ವ ಹೆರಿಗೆ ಮತ್ತು ತಾಯಿಯಲ್ಲಿ ಪೌಷ್ಟಿಕಾಂಶದ ಕೊರತೆ ಹಿನ್ನಲೆ ಮಗುವಿನ ತೂಕ ಅತ್ಯಂತ ಕಡಿಮೆಯಿತ್ತು. ಹುಟ್ಟಿದಾಗ ಕೇವಲ 500 ಗ್ರಾಂ. ತೂಕ ಹೊಂದಿದ್ದ ಹೆಣ್ಣು ನವಜಾತ ಶಿಶುವಿಗೆ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ತಾಯಿ ಮತ್ತು ಮಗುವಿನ ಆಸ್ಪತ್ರೆ ವೈದ್ಯರು ನಿರಂತರ 50 ದಿನಗಳ ಕಾಲ ‘ಕಾಂಗರೂ’ ಮಾದರಿ ಆರೈಕೆಯ ಚಿಕಿತ್ಸೆ ನೀಡಿದ್ದು, ಈಗ ಮಗುವಿನ ತೂಕ 1.2 ಕೆ.ಜಿ.ಗೆ ಏರಿಕೆಯಾಗಿದೆ..!
ಮಗು ಬೆಳವಣಿಗೆ ಬಗ್ಗೆ ಪೋಷಕರಿಗೆ ಹಾಗೂ ವೈದ್ಯರಿಗೆ ಅನುಮಾನಗಳು ವ್ಯಕ್ತವಾಗಿದ್ದವು.ಆದರೆ ವೈದ್ಯರು ವಿಶೇಷ ಕಾಳಜಿ ವಹಿಸಿ ಕಾಂಗರೂ ಮಾದರಿಯಲ್ಲಿ ನೀಡಿದ ಚಿಕಿತ್ಸೆ ಈಗ ಫಲ ನೀಡಿದ್ದು, ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ ಹಿಂದೊಮ್ಮೆ 700 ಗ್ರಾಂ. ಇದ್ದ ಮಕ್ಕಳ ತೂಕವನ್ನು ಕೂಡ ಕ್ರಮೇಣ ಹೆಚ್ಚಿಸಲಾಗಿತ್ತು.ಆದರೆ ಇಲ್ಲಿ ಇದೇ ಮೊದಲ ಬಾರಿಗೆ 500 ಗ್ರಾಂ. ತೂಕದ ಮಗುವಿಗೆ ವೈದ್ಯರು ‘ಮರುಜನ್ಮ’ ನೀಡಿದ್ದು, ವೈದ್ಯರು ಹೇಳುವಂತೆ ಇಲ್ಲಿನ ಆಸ್ಪತ್ರೆಯಲ್ಲಿ ಇಷ್ಟೊಂದು ಕಡಿಮೆ ತೂಕದ ಮಗು ಚೇತರಿಸಿಕೊಂಡ ವಿರಳ ಪ್ರಕರಣ ಇದಾಗಿದೆ ಎಂದಿದ್ದಾರೆ.
ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ಸಾರವ್ವ ಎಂಬ ಮಹಿಳೆಗೆ ಇದು ಎರಡನೇ ಹೆರಿಗೆಯಾಗಿತ್ತು. ಮೊದಲ ಮಗನಿಗೆ ಈಗ ನಾಲ್ಕು ವರ್ಷ ತುಂಬಿದೆ.ಆದರೆ ಎರಡನೇ ಮಗುವಿಗೆ ಏಳು ತಿಂಗಳು ಗರ್ಭಿಣಿಯಾಗಿದ್ದಾಗ ಇದೇ ವರ್ಷದ ಆಗಸ್ಟ್ 30ರಂದು ಸಹಜ ಹೆರಿಗೆಯಾಗಿದೆ. ಆಗ ಮಗುವಿನ ತಲೆ, ಶ್ವಾಸಕೋಶ, ಕರಳು, ಚರ್ಮ ಯಾವುದೂ ಸರಿಯಾಗಿ ಬೆಳೆದಿರಲಿಲ್ಲವೆನ್ನುವ ಮಾಹಿತಿಯಿದೆ. ಚರ್ಮ ಬೆಳೆಯದೇ ಇದ್ದಾಗ ಬೇರೆ ಸೋಂಕು ತಗಲುವ ಸಾಧ್ಯತೆ ಇದೆ ಎನ್ನುವ ಹಿನ್ನಲೆಯಲ್ಲಿ ಇಂಥ ಸಂದಿಗ್ಧ ಸಂದರ್ಭದಲ್ಲಿ ‘ಕಾಂಗರೂ’ ಆರೈಕೆ ಮಾಡಿಸಲಾಗಿದೆ.
ಆಸ್ಪತ್ರೆ ವೈದ್ಯರ ಬಗ್ಗೆ ಮಗುವಿನ ಪೋಷಕರು ಧನ್ಯವಾದ ತಿಳಿಸಿದ್ದು,ವೈದ್ಯರೇ ನಮ್ಮ ಪಾಲಿನ ದೇವರು ಎಂದಿದ್ದಾರೆ.ಇನ್ನು ಈ ಬಗ್ಗೆ ಮಾತನಾಡಿದ ವೈದ್ಯರು ಮಗುವಿಗೆ ತೂಕ ಕಡಿಮೆ ಇದ್ದಾಗ ಹಲವು ಸಮಸ್ಯೆಗಳು ಇರುತ್ತವೆ.ಇದೀಗ ಆ ಸಮಸ್ಯೆಗಳನ್ನು ಗುಣಪಡಿಸಲಾಗಿದೆ.ತಾಯಿ-ಮಗು ಈಗ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.