ನ್ಯೂಸ್ ನಾಟೌಟ್: ಸಂಪಾಜೆಯಲ್ಲಿ ಹಲವು ವರ್ಷಗಳಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನೂರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿದ್ದ ನಿವೃತ್ತ ಪ್ರಾಂಶುಪಾಲೆ ಮಾಲತಿ ಅವರ ಮನೆಯಿಂದ ಕಳ್ಳರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸುಳ್ಯದ ಜಟ್ಟಿಪಳ್ಳದಲ್ಲಿರುವ ಬೋರುಗುಡ್ಡೆಯಲ್ಲಿರುವ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಮೋಹನ್ ದಾಸ್ ಮುದ್ಯ ಅವರು ಪತ್ನಿ ಮಾಲತಿಯವರ ಜೊತೆಗೂಡಿ ಚೆನ್ನೈಗೆ ಹೋಗಿದ್ದರು. ಅಲ್ಲಿಂದ ಬಂದು ಹಾಸನದಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಇತ್ತ ಕಳ್ಳರು ಸುಳ್ಯದಲ್ಲಿರುವ ಮನೆಯೊಳಗೆ ನುಗ್ಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಗೆ ಮರಳಿ ಬಂದಾಗ ಮನೆಯಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಬಂಗಾರದ ಗಂಟನ್ನು ಕಳ್ಳರು ತೆಗೆದುಕೊಂಡು ಹೋಗಿದ್ದರು.
ದಂಪತಿ ಮನೆಗೆ ತಲುಪುವ ಮೊದಲೇ ಮನೆಯ ಬಾಗಿಲು ಮುರಿದು ಯಾರೋ ಒಳ ನುಗ್ಗಿದ್ದಾರೆ ಅನ್ನುವ ವಿಚಾರದ ಬಗ್ಗೆ ಮನೆಯ ಮಹಡಿಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾತ್ರಿಯೇ ಮಂಗಳೂರಿನಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿ ತಪಾಸಣೆ ಮಾಡಲಾಗಿತ್ತು.
ವಿಷಯ ತಿಳಿದು ಹಾಸನದಿಂದ ಮನೆಗೆ ಬಂದ ಮೋಹನ್ದಾಸ್ ದಂಪತಿಗೆ ಶಾಕ್ ಆಗಿತ್ತು. ಏಕೆಂದರೆ ಕಳ್ಳರು ಸುಮಾರು 20 ಲಕ್ಷ ರೂ ಮೌಲ್ಯದ 350 ಗ್ರಾಂ ಚಿನ್ನಾಭರಣ ಕಳವು ನಡೆಸಿದ್ದಾರೆ ಅನ್ನುವುದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಉಂಗುರ, ಸರ, ನೆಕ್ಲೇಸ್ ಸಹಿತ ಸುಮಾರು 350 ಗ್ರಾಂ. ನಷ್ಟು ಚಿನ್ನಾಭರಣ ಕಳವಾಗಿದೆ. ಕಳ್ಳರ ಜಾಡು ಹಿಡಿದು ಹೊರಟಿರುವ ಪೊಲೀಸರು ಈಗ ತನಿಖೆ ಮುಂದುವರಿಸಿದ್ದಾರೆ.