ನ್ಯೂಸ್ ನಾಟೌಟ್: ಪರಶುರಾಮ ಥೀಮ್ ಪಾರ್ಕ್ ನಲ್ಲಿರುವ ಪರಶುರಾಮನ ಕಂಚಿನ ಪ್ರತಿಮೆಯೇ ಈಗ ಎಲ್ಲರ ಕೇಂದ್ರ ಬಿಂದು. ಮೂರ್ತಿ ಸರಿ ಇಲ್ಲವಂತೆ ಹಾಗಂತೆ ಹೀಗಂತೆ ಅನ್ನುವ ವಿವಾದಗಳು ಭಾರಿ ಸದ್ದಾಗುತ್ತಿದೆ. ಎಲ್ಲೋ ಒಂದು ಕಡೆ ಇಡೀ ಕಾರ್ಕಳದ ಹೆಸರಿಗೇ ಧಕ್ಕೆ ತರುವಂತಹ ಕೆಲಸ ವ್ಯವಸ್ಥಿತವಾಗಿ ನಡೆಸಲಾಗ್ತಿದೆ ಅನ್ನುವಂತಹ ಅನುಮಾನಗಳು ಶುರುವಾಗಿದೆ.
ಪರಶುರಾಮ್ ಥೀಮ್ ಪಾರ್ಕ್ ಹೆಸರನ್ನು ಈಗ ಅಪಪ್ರಚಾರಕ್ಕೆ ಬಳಸಲಾಗುತ್ತಿದೆಯಾ..? ಶಾಸಕ ಸುನಿಲ್ ಕುಮಾರ್ ಹೆಸರಿಗೆ ವ್ಯವಸ್ಥಿತವಾಗಿ ಮಸಿ ಬಳಿಯುವುದಕ್ಕೆ ಮಾಡಲಾಗುತ್ತಿದೆಯಾ..? ಈ ಬಗ್ಗೆ ಏನೆಲ್ಲ ಚರ್ಚೆಗಳು ನಡೆಯುತ್ತಿವೆ ಅನ್ನುವುದರ ಕುರಿತ ವರದಿ ಇಲ್ಲಿದೆ ನೋಡಿ..
ಹೌದು, ಅಂದು ಕಾರ್ಕಳದಲ್ಲಿ ಪಾಳು ಬಿದ್ದು ಹೋಗಿದ್ದ ಕಲ್ಲಿನಗುಡ್ಡವೊಂದಕ್ಕೆ ಹೊಸ ಮೆರುಗು ಬಂತು..! ಉಡುಪಿಯ ಕಾರ್ಕಳದ ಬೈಲೂರಿನ ಯರ್ಲಪಾಡಿ ಉಮಿಕಲ್ ಕುಂಜದ ಕಲ್ಲುಬಂಡೆಗಳೇ ತುಂಬಿದ್ದ ಗುಡ್ಡವೊಂದು ಪ್ರವಾಸಿಗರ ಹಾಟ್ ಸ್ಪಾಟ್ ಆಯಿತು. ತುಳುನಾಡಿನ ಸೃಷ್ಟಿಕರ್ತ ನಾಥ ಪರಂಪರೆಯನ್ನ ಎಲ್ಲೆಡೆ ಪಸರಿಸಿದ ಪರಶುರಾಮನ ಮೂರ್ತಿ ಸೇರಿದಂತೆ ಪರಶುರಾಮ ಥೀಂ ಪಾರ್ಕ್ ನೋಡುಗರನ್ನು ಬೆರಗುಗೊಳಿಸುವಂತೆ 2023ರ ಜನವರಿ 27ಕ್ಕೆ ಲೋಕಾರ್ಪಣೆಗೊಂಡಿತ್ತು.
ಈಗಿನ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವರೂ ಆದ ವಿ.ಸುನೀಲ್ ಕುಮಾರ್ ಅವರು ವಿಶೇಷ ಮುತುರ್ವಜಿ ವಹಿಸಿದ್ದರು. ಈ ಥೀಂ ಪಾರ್ಕನ್ನು ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಯಿತು. ಆದರೆ ಇದೀಗ ಅಲ್ಲಿರುವ ಪರಶುರಾಮ ಮೂರ್ತಿ ಕಂಚಿನದ್ದಲ್ಲ.. ಅದು ಪೈಬರ್ ನಿಂದ ಕೂಡಿದೆ ಅನ್ನುವ ಮೂಲಕ ಇಡೀ ರಾಜ್ಯದಲ್ಲೇ ಚರ್ಚೆಯ ವಿಷಯವಾಗಿದೆ. ಕಾರ್ಕಳ ಶಾಸಕರತ್ತಲೇ ವಿರೋಧಿಗಳು ಕೈ ತೋರಿಸುತ್ತಿದ್ದಾರೆ.
“ಪರಶುರಾಮ ಮೂರ್ತಿ ಸಂಬಂಧಪಟ್ಟಂತೆ ತಾಂತ್ರಿಕ ತಜ್ಞರು ಮರುವಿನ್ಯಾಸದ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಸಾರ್ವಜನಿಕವಾಗಿ ನಾವು ಸ್ಪಷ್ಟಪಡಿಸಿದ್ದೆವು. ಮೂರ್ತಿಯನ್ನು ಬಲಯುತಗೊಳಿಸುವ ಬಗ್ಗೆ ಆ ದಿನವೇ ಹೇಳಲಾಗಿತ್ತು. ಪರಶುರಾಮನ ಬಲಗೈಯಲ್ಲಿ ಇರುವ ಕೊಡಲಿ ತೀರಾ ಭಾರವಾಗಿದ್ದು, ಎತ್ತರವಾದ ಪ್ರದೇಶದಲ್ಲಿ ಆ ಒತ್ತಡವನ್ನು ನಿಭಾಯಿಸುವಷ್ಟು ಶಕ್ತಿ ಅದಕ್ಕಿಲ್ಲ. ಇನ್ನು ಎಡಗೈನಲ್ಲಿ ಹಿಡಿದ ಬಿಲ್ಲು ಕೂಡಾ ಬದಲಾವಣೆ ಮಾಡಿ ಇನ್ನಷ್ಟು ಬಲಪಡಿಸುವ ಉದ್ದೇಶವಿತ್ತು. ದೀರ್ಘಾವಧಿ ಬಾಳ್ವಿಕೆಗಾಗಿ ತಜ್ಞರ ಅಭಿಪ್ರಾಯ ಪಡೆದೇ ಬಲಯುತಗೊಳಿಸುವ ತೀರ್ಮಾನವನ್ನು ಉದ್ಘಾಟನೆ ದಿನದಂದೇ ಮಾಡಲಾಗಿದ್ದು ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಆದರೆ ಈಗ ನಮ್ಮ ಮೇಲೆ ಇಲ್ಲದ ಆರೋಪಗಳನ್ನು ಹೊರೆಸುವ ಪ್ರಯತ್ನ ಮಾಡಲಾಗಿದೆ.
ಕಾಮಗಾರಿ ನಡೆಸಿರುವ ಸಂದರ್ಭ ಅಲ್ಲಿನ ಸ್ಥಳೀಯರು ಸೇರಿದಂತೆ ಹೆಚ್ಚಿನವರು ಆ ಸ್ಥಳಕ್ಕೆ ಭೇಟಿ ನೀಡಿದ್ದರು. ಮೂರ್ತಿಯನ್ನು ಹಲವು ಮಂದಿ ಹಲವು ದಿನಗಳ ಕಾಲ ಹಗಲು-ರಾತ್ರಿ ಕಾಮಗಾರಿ ನಡೆಸಿ ವೆಲ್ಡಿಂಗ್ ಮಾಡಿರುವುದನ್ನು ಗಮನಿಸಿದ್ದರು. ಒಂದು ವೇಳೆ ಫೈಬರ್ ಅಥವಾ ಪ್ಲಾಸ್ಟಿಕ್ ಆಗಿರುತ್ತಿದ್ದರೆ ಇಷ್ಟೊಂದು ಗಾಳಿ ಮಳೆಗೆ ಕಳೆದ ೧೦ ತಿಂಗಳ ತನಕ ವಿಗ್ರಹ ಸದೃಢವಾಗಿ ನಿಲ್ಲಲು ಸಾಧ್ಯವಿತ್ತೇ? ಇದೊಂದು ವಿವಾದವೇ ಅಲ್ಲ, ಪ್ರತಿಮೆ ಕಂಚಿನದ್ದೇ ಆಗಿದ್ದು ಅಭಿವೃದ್ಧಿಯನ್ನು ಸಹಿಸದ ಕೆಲವರು ಇಂತಹ ವಿವಾದವೆಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಯೋಜನೆ ಕಾಮಗಾರಿ ಮುಕ್ತಾಯವಾಗಿ ಪ್ರವಾಸೋದ್ಯಕ್ಕೆ ಇನ್ನೂ ಹಸ್ತಾಂತರವಾಗಿಲ್ಲ. ಅದಕ್ಕೆ ಮುಂಚಿತವಾಗಿಯೇ ಕಾಂಗ್ರೆಸ್ ಏನೇನೋ ಪ್ಲಾನ್ ಮಾಡುತ್ತಾ ವಿವಾದ ಹುಟ್ಟು ಹಾಕಿದೆ. ಮೂರ್ತಿ ಬಗ್ಗೆ ಅಷ್ಟೊಂದು ಆರೋಪ ಮಾಡುವವರು ಯಾವುದಾದರೂ ದಾಖಲೆಗಳನ್ನು ಮುಂದಿಡಲಿ. ಈ ಯೋಜನೆಯನ್ನು ಕಾರ್ಕಳದ ಜನತೆ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ನವರಿಗೆ ಇದು ಬೇಡವಾಗಿದ್ದು, ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಮೊದಲು ಜಾಗ ಸರಿಯಿಲ್ಲ ಎಂದಿದ್ದ ಕಾಂಗ್ರೆಸ್ ಇದೀಗ ಮೂರ್ತಿ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಮೂರ್ತಿ ಗುಣ ಮಟ್ಟದ ಮೇಲೆ ಅಷ್ಟೊಂದು ಅನುಮಾನಗಳಿದ್ದರೆ ತನಿಖೆ ಮಾಡಿಸಲಿ. ಅದು ಬಿಟ್ಟು ಅಪಪ್ರಚಾರ ಮಾಡಿಕೊಂಡು ಕಾಲಹರಣ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ಗೆ ಚಾಟಿಯೇಟು ಬೀಸಿದ್ದಾರೆ.