ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಅನ್ಯಧರ್ಮಿಯರು ಶ್ರೀ ದುರ್ಗಾ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದು ಜನರಿಗೆ ಹಲಾಲ್ ಆಹಾರದ ಸೇವನೆ ಮಾಡಿಸುತ್ತಿದ್ದಾರೆ ಅನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ. ಹಿಂದೂ ಸಂಘಟನೆಗಳ ಪ್ರಮುಖರು ಬೋರ್ಡ್ ನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಲ್ಲುಗುಂಡಿಯ ಕೆಳಗಿನ ಪೇಟೆಯಲ್ಲಿ ಹಿಂದೂ ವ್ಯಕ್ತಿಯೊಬ್ಬರು ಹೋಟೆಲ್ ನಡೆಸುತ್ತಿದ್ದಾರೆ. ಹೋಟೆಲ್ಗೆ ಶ್ರೀ ದುರ್ಗಾ ಎಂದು ಹೆಸರನ್ನಿಟ್ಟಿದ್ದಾರೆ. ಇಷ್ಟೇ ಆಗಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ಆದರೆ ಬೋರ್ಡ್ ನ ಮಧ್ಯ ಭಾಗದ ಎಡ ಬದಿಗೆ ‘ಹಲಾಲ್ ‘ ಎಂದು ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಅನ್ನುವುದೇ ದೊಡ್ಡ ಕುತೂಹಲವಾಗಿದೆ. ಈ ಹಿಂದೆ ಅಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹೋಟೆಲ್ ನಡೆಸುತ್ತಿದ್ದರು. ಅದೇ ಹೋಟೆಲ್ಅನ್ನು ಹಿಂದೂ ವ್ಯಕ್ತಿಯೊಬ್ಬರು ಖರೀದಿಸಿ ನಡೆಸುತ್ತಿದ್ದಾರೆ. ಹೀಗೆ ಹೋಟೆಲ್ ಆರಂಭಿಸಿದ ನಂತರ ರಸ್ತೆ ಬದಿಯಲ್ಲಿರುವ ಹಳೆಯ ಬೋರ್ಡ್ ಅನ್ನು ಇದ್ದ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಳೆಯ ಹೆಸರನ್ನು ತೆಗೆದು ಹೊಸದಾಗಿ ಶ್ರೀ ದುರ್ಗಾ ಎಂದು ನಾಮಕರಣ ಮಾಡಲಾಗಿದೆ. ಆದರೆ ಹಲಾಲ್ ಅನ್ನುವ ಪದ ಹಾಗೆಯೇ ಬಿಟ್ಟು ಹೋಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸದ್ಯ ಪ್ರಕರಣದ ಗಂಭೀರತೆ ತೀವ್ರಗೊಂಡಾಗ ಹೋಟೆಲ್ ಮಾಲೀಕ ಹಲಾಲ್ ಪದವನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಎಲ್ಲ ವಿವಾದಗಳು ಬಗೆಹರಿದಿವೆ.
ವಿವಾದ ಬಳಿಕ ಸರಿಪಡಿಸಿರುವ ಬೋರ್ಡ್
ಇಸ್ಲಾಂ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಂನಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗುತ್ತದೆ. ಪರಿಶುದ್ಧವಿಲ್ಲದ ಆಹಾರ ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿದೆ. ಕೋಳಿ, ಕುರಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎಂದು ಇಸ್ಲಾಂನಲ್ಲಿ ಪರಿಗಣಿಸಲ್ಪಡುತ್ತದೆ. ವಧಿಸುವ ಮುಂಚೆಯೇ ಸತ್ತಿದ್ದ ಪ್ರಾಣಿಗಳು , ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳ ಮಾಂಸವನ್ನು ಇಸ್ಲಾಂ ಧರ್ಮ ಪ್ರಕಾರ ತಿನ್ನುವಂತಿಲ್ಲ. ಇದನ್ನು ಹಲಾಲ್ ಎನ್ನುತ್ತಾರೆ. ಇನ್ನು ಪ್ರಾಣಿಗಳನ್ನು ವಧಿಸುವುದಕ್ಕೂ ಹಲವು ನಿಯಮಗಳಿವೆ. ಪ್ರಾಣಿಯ ದೇಹದಿಂದ ವಧಿಸಿದ ನಂತರ ರಕ್ತವೆಲ್ಲವೂ ಹೊರಗೆ ಬರಬೇಕು. ಸತ್ತ ಪ್ರಾಣಿಯ ಮುಖ ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಇರಬೇಕು. ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು, ತಲೆಯನ್ನು ಒಡೆಯದೆ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಕುರಾನ್ ನಲ್ಲಿ ತಿಳಿಸಲಾಗಿದೆ. ಇದನ್ನು ಹಲಾಲ್ ಕಟ್ ಎಂದು ಕರೆಯುತ್ತಾರೆ.