ನ್ಯೂಸ್ ನಾಟೌಟ್: ಸುಳ್ಯದ ಸೇಂಟ್ ಜೋಸೆಫ್ ಶಾಲಾ ಆಶ್ರಯದಲ್ಲಿ ಅ.26 ಮತ್ತು 27ರಂದು ನಡೆಯಲಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟಕ್ಕೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಅಂತಿಮ ಹಂತದ ಸಿದ್ಧತೆಗಳ ಕುರಿತು ಶುಕ್ರವಾರ ಸೇಂಟ್ ಜೋಸೆಫ್ ಶಾಲಾ ಸಂಚಾಲಕ ರೆ.ಫಾ. ವಿಕ್ಟರ್ ಡಿ’ಸೋಜಾ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ರೆ.ಫಾ. ವಿಕ್ಟರ್ ಡಿ’ಸೋಜಾ ಅವರು, “ಅಕ್ಟೋಬರ್ 26ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನಮ್ಮ ಕ್ರೀಡಾಕೂಟದ ಉದ್ಘಾಟನೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಮಕ್ಕಳು, ಪೋಷಕರು ಪಾಲ್ಗೊಳ್ಳಲಿದ್ದಾರೆ.
ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಎಲ್ಲ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಸಕ್ತರು ಆಗಮಿಸಿ ಕೂಟವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ದೈಹಿಕ ಶಿಕ್ಷಕರಾದ ಕೊರಗಪ್ಪ ಮಾತನಾಡಿ, ಸುಮಾರು 900 ಮಂದಿ ಶಾಲಾ ಮಕ್ಕಳು ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ತಾಲೂಕಿನ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದರು. ಇದೇ ವೇಳೆ ಮಾತನಾಡಿದ ಪೋಷಕರ ಸಂಘದ ಅಧ್ಯಕ್ಷ ಜೆ.ಕೆ ರೈ ಅವರು, ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾ ಸ್ಪರ್ಧಿಗಳಿಗೆ ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ.
ಕ್ರೀಡಾಕೂಟಕ್ಕೆ ಎಲ್ಲ ಹಂತದ ತಯಾರಿಗಳನ್ನು ಅಂತಿಮಗೊಳಿಸಿಕೊಂಡಿದ್ದೇವೆ. ಕ್ರೀಡಾಕೂಟ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದೇವೆ ಎಂದರು. ಸೇಂಟ್ ಜೋಸೆಫ್ ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಬಿನೋಮ ಸೇಂಟ್ ಬ್ರಿಜಿಡ್ಸ್ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ, ಕ್ರೀಡಾ ಕೂಟ ಜೊತೆ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.