ನ್ಯೂಸ್ ನಾಟೌಟ್: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ, ಪ್ಯಾಲೆಸ್ತೀನ್ನ ಹಮಾಸ್ ನೇತೃತ್ವದ ರಾಷ್ಟ್ರೀಯ ಭದ್ರತಾ ಪಡೆಯ ಮುಖ್ಯಸ್ಥ ಜೆಹಾದ್ ಮೈಸೆನ್ ಕೊನೆಯುಸಿರೆಳೆದಿದ್ದಾರೆ.
ವೈಮಾನಿಕ ದಾಳಿಯ ವೇಳೆ ಮೈಸೆನ್ ತಮ್ಮ ಕುಟುಂಬದ ಇತರ ಸದಸ್ಯರೊಂದಿಗೆ ಮನೆಯಲ್ಲಿ ಹತರಾಗಿದ್ದಾರೆ ಎಂದು ಹಮಾಸ್ ಸಹವರ್ತಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಗಾಜಾದ ರಾದ್ವಾನ್ ನೆರೆ ಹೊರೆಯ ಮೇಲೆ ಇಸ್ರೇಲ್ ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಸುದ್ದಿ ಸಂಸ್ಥೆ, ಗಾಜಾ ಪಟ್ಟಿಯ ಶೇಖ್ ರಾದ್ವಾನ್ ಮತ್ತು ಅದರ ನೆರೆ ಹೊರೆ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ಬಾಂಬ್ ದಾಳಿಯಲ್ಲಿ ಗಾಜಾ ಪಟ್ಟಿಯ ಪ್ಯಾಲೆಸ್ತೀನ್ ರಾಷ್ಟ್ರೀಯ ಭದ್ರತಾ ಪಡೆಗಳ ಮೇಜರ್ ಜನರಲ್ ಕಮಾಂಡರ್ ಜೆಹಾದ್ ಮೈಸೆನ್ ಕುಟುಂಬವು ಅಸುನೀಗಿದೆ ಎಂದು ಹೇಳಿದೆ.
ಗಾಜಾ ಪಟ್ಟಿಯ ಹಮಾಸ್ ಬಂಡುಕೋರರ ಮತ್ತು ಇಸ್ರೇಲ್ ನಡುವಿನ ಯುದ್ಧವು ಈಗ 13ನೇ ದಿನಕ್ಕೆ ಕಾಲಿಟ್ಟಿದೆ. ಗಾಜಾಪಟ್ಟಿಯಲ್ಲಿ ಅರ್ಧದಷ್ಟು ಜನರು ನಿರ್ಗತಿಕರಾಗಿದ್ದು, 5000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ವಿನಂತಿಯ ಮೇರೆಗೆ ಗಾಜಾ ಪಟ್ಟಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಮಾನವೀಯ ನೆರವು ನೀಡಲು ಅನುಮತಿಸಲಾಗುವುದು ಎಂದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.