ನ್ಯೂಸ್ ನಾಟೌಟ್: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಉಚ್ಛಾಟನೆ, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ವಿರುದ್ಧ ಸಿಎಂ ಇಬ್ರಾಹಿಂ ತೀವ್ರ ವಾಗ್ದಾಳಿ ನಡೆಸಿದರು. ಯಾವ ಆಧಾರದಲ್ಲಿ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೀರಿ? ದೇವರು ಮತ್ತು ಜನ ನನ್ನ ಕೈಹಿಡಿಯುತ್ತಾರೆ. ಎಲ್ಲವನ್ನೂ ಹೊರಗೆ ತಂದರೆ ಒಳ್ಳೆಯದಲ್ಲ, ವಿಸರ್ಜನೆ ಮಾಡಿದ್ದು ತಪ್ಪು. ಆದೇಶ ವಾಪಸ್ ಪಡೆದು ಪಕ್ಷದ ಸಭೆ ಕರೆಯಿರಿ. ನಾನು ಹೋಗದಿದ್ದರೆ ಚನ್ನಪಟ್ಟಣದಲ್ಲಿ ಎಚ್ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ? ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು? ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಹಾಸನ, ಮಂಡ್ಯ, ಹೊಳೆನರಸೀಪುರಕ್ಕೆ ಹೋಗಿ ಸಭೆ ಮಾಡುತ್ತೇನೆ ಎಂದಿದ್ದಾರೆ.
ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಬಹಿರಂಗವಾಗಿ ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತ್ಯೇಕ ಸಭೆ ನಡೆಸಿ ಗೊಂದಲ ಸೃಷ್ಟಿಸಿದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಗುರುವಾರ ಉಚ್ಛಾಟನೆ ಮಾಡಲಾಗಿತ್ತು. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ, ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ, ಎಲ್ಲರ ಅಭಿಪ್ರಾಯ ಪಡೆದು ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಇಬ್ರಾಹಿಂ ಮುಂದಿನ ನಡೆ ಏನು..? ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಸಿಎಂ ಇಬ್ರಾಹಿಂ ಪಕ್ಷದಿಂದ ಹೊರಬಂದು ಮರಳಿ ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ. ಏಕೆಂದರೆ, ಈಗಾಗಲೇ ಇಂಡಿಯಾ ಒಕ್ಕೂಟದ ಪರ ಇಬ್ರಾಹಿಂ ಬ್ಯಾಟ್ ಬೀಸಿದ್ದಾರೆ. ಅಥವಾ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬರಬಹುದು. ಇದ್ಯಾವುದನ್ನು ಮಾಡದೇ ರಾಜಕೀಯ ಸಾಕು ಅಂತ ರಾಜಕೀಯ ನಿವೃತ್ತಿಯನ್ನೂ ಘೋಷಿಸಬಹುದು. ಹೀಗಾಗಿ ಇಬ್ರಾಹಿಂ ಅವರು ಸದ್ಯದ ಬೆಳವಣಿಗೆ ಕುತೂಃಲ ಮೂಡಿಸಿದೆ.