ನ್ಯೂಸ್ ನಾಟೌಟ್: ಸಮಾಜ ಘಾತುಕರಾಗಿ ಕಾನೂನು ಮೀರಿ ನಡೆದುಕೊಂಡ ಕ್ರಿಮಿನಲ್ ಹಿನ್ನೆಲೆಯುಳ್ಳ ರೌಡಿ ಶೀಟರ್ ಒಬ್ಬನಿಗೆ ಜಿಲ್ಲಾಧಿಕಾರಿ, ಎಸ್ ಪಿ ಎದುರೇ ಅಧಿಕಾರಿಗಳ ಕೈನಿಂದ ಸನ್ಮಾನ ಮಾಡಿಸಿರುವ ಘಟನೆ ಕೆಆರ್ ಎಸ್ ನಲ್ಲಿ ನೃತ್ಯ ಕಾರಂಜಿ ಉದ್ಘಾಟನೆ ವೇಳೆ ನಡೆದಿದೆ.
ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ (Ramesha Bandisiddegowda) ಅವರ ಇಂತಹ ಕ್ರಮಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸನ್ಮಾನ ಸ್ವೀಕರಿಸಿದ ನಂತರ ರೌಡಿಶೀಟರ್, ಶಾಸಕರ ಕಾಲಿಗೆ ಬಿದ್ದು ನಮಸ್ಕರಿಸಿದ ನಂತರ ಶಾಸಕ ರಮೇಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ (N.Chaluvarayaswamy) ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ.
ರೌಡಿಶೀಟರ್ ಗ್ರಾಮ ಪಂಚಾಯತ್ ಸದಸ್ಯನೂ ಆಗಿದ್ದು ರೌಡಿ ಶೀಟರ್ ದೇವರಾಜು ಅಲಿಯಾಸ್ ಬುಲ್ಲಿ ಎಂಬಾತನಿಗೆ ಶಾಸಕ ರಮೇಶ್ ಅವರು ಅಧಿಕಾರಿಗಳ ಕೈಯಿಂದ ಸನ್ಮಾನಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.
ಹಲವಾರು ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವ ದೇವರಾಜು, ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ವೇದಿಕೆಗೆ ಕರೆದು ಗೌರವ ಸಮರ್ಪಣೆ ಮಾಡಲಾಗಿದೆ. ಶಾಸಕರ ಸೂಚನೆ ಮೇರೆಗೆ ಕಾವೇರಿ ನೀರಾವರಿ ನಿಗಮದಿಂದ ಗೌರವ ಸಮರ್ಪಣೆ ಮಾಡಲಾಗಿದೆ. ರೌಡಿ ಶೀಟರ್ಗೆ ಸನ್ಮಾನಿಸಿದ ವೇದಿಕೆಯಲ್ಲಿ ಮಾತನಾಡುತ್ತಾ ತಮ್ಮನ್ನೇ ಉದಾಹರಣೆಯನ್ನಾಗಿಕೊಂಡು ಸಮರ್ಥನೆ ಮಾಡಿಕೊಂಡ ಶಾಸಕ ರಮೇಶ್ ಬಂಡಿಸಿದ್ದೇಗೌಡ, ತನ್ನ ಮೇಲೂ ಸಿಬಿಐ ಕೇಸ್ ಇದೆ. ಹಾಗಾದರೆ ನಾನೂ ಕಾರ್ಯಕ್ರಮಕ್ಕೆ ಹೋಗಬಾರದು. ಆಪಾದನೆ ಇದ್ದ ಮಾತ್ರಕ್ಕೆ ಅಪರಾಧಿ ಅಲ್ಲ ಎಂದು ಹೇಳಿ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ.
ಐದು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ರೌಡಿಶೀಟರ್ಗಳು ರಾಜಕೀಯಕ್ಕೆ ಎಂಟ್ರಿಕೊಡಲು ಆರಂಭಿಸಿದ್ದರು. ರೌಡಿಶೀಟರ್ಗಳಾದ ಸೈಲೆಂಟ್ ಸುನಿಲ, ಬೆತ್ತನಗೆರೆ ಶಂಕರ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಅನೇಕರು ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಮಂಡ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ರೌಡಿಶೀಟರ್ ಫೈಟರ್ ರವಿ ಸ್ವಾಗತಿಸಿದ್ದು ಭಾರೀ ಚರ್ಚೆಗೆ ಕೂಡ ಕಾರಣವಾಗಿತ್ತು.