ನ್ಯೂಸ್ ನಾಟೌಟ್: ದೀಪಾವಳಿ ಹಬ್ಬಕ್ಕೆ ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ ಆರಂಭದಲ್ಲಿ ಬೆಂಗಳೂರು ಸಮೀಪದ ಅತ್ತಿಬೆಲೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 17 ಮಂದಿ ಕೊನೆಯುಸಿರೆಳೆದ ಹಿನ್ನಲೆ ಗೃಹ ಸಚಿವ ಪರಮೇಶ್ವರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
“ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಇಂತಹ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಮಂಗಳವಾರ ಕೂಡ ತಮಿಳುನಾಡಿನಲ್ಲಿ ಸುಮಾರು 12 ಮಂದಿ ಅಸುನೀಗಿದ್ದಾರೆ, ಇಂತಹ ಘಟನೆಗಳು ನಡೆಯದಂತೆ ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಹೊಸ ಕಾನೂನು ತರುತ್ತೇವೆ. ಈ ಘಟನೆ ನಮಗೆ ಪಾಠ ಕಲಿಸಿದೆ, ಅಗತ್ಯ ಬಿದ್ದರೆ ಈಗ ಇರುವ ಕಾನೂನಿಗೆ ತಿದ್ದುಪಡಿ ತರಲಾಗುವುದು” ಎಂದು ಹೇಳಿದ್ದಾರೆ.
ಮುಂಬರುವ ದೀಪಾವಳಿ ಹಬ್ಬದಂದು ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದು, ತಮಿಳುನಾಡಿನಲ್ಲಿ ಪಟಾಕಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ರಾಜ್ಯಕ್ಕೆ ಅಲ್ಲಿಂದಲೇ ಪಟಾಕಿ ಪೂರೈಕೆ ಆಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ಉದ್ಯಮದಲ್ಲಿ ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ.
ಪಟಾಕಿ ನಿಷೇಧಿಸುವುದರಿಂದ ಪಟಾಕಿ ವ್ಯಾಪಾರಸ್ಥರು, ಉದ್ಯಮಿಗಳು, ಇದನ್ನೇ ನಂಬಿಕೊಂಡಿರುವ ಸಾವಿರಾರು ಕೂಲಿ ಕಾರ್ಮಿಕರು ಬೀದಿಗೆ ಬೀಳುತ್ತಾರೆ ಎಂಬುದು ಹಲವರ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ