ನ್ಯೂಸ್ ನಾಟೌಟ್: ಮದ್ಯದಂಗಡಿ ಲೈಸೆನ್ಸ್ ವಿವಾದ ಸಂಬಂಧ ವೇದಿಕೆ ಮೇಲೆಯೇ ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಎಚ್.ಕೆ ಸುರೇಶ್ ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ನಡೆದಿದೆ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರ ಕಿತ್ತಾಡಿಕೊಂಡಿದ್ದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಕಕ್ಕಾಬಿಕ್ಕಿಯಾಗಿದ್ದಾರೆ.
ಕರಗುಂದ ಗ್ರಾಮದಲ್ಲಿ ಮದ್ಯದಂಗಡಿ ತೆರೆದು ಹೆಣ್ಣುಮಕ್ಕಳ ತಾಳಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಭಾಷಣ ಮಾಡುತ್ತಿದ್ದರು. ಇದಕ್ಕೆ ಉತ್ತರ ನೀಡಲು ಶಾಸಕ ಕೆ.ಎಂ.ಶಿವಲಿಂಗೇಗೌಡ ಮುಂದಾಗಿದ್ದಾರೆ. ಜನ ಸೇರಿಸುವವನು ನಾನು, ನೀನು 15 ಜನ ಕರೆದುಕೊಂಡು ಬಂದು ಸಭೆ ಹಾಳು ಮಾಡಲು ಬಂದಿದ್ದೀಯಾ ಎಂದು ಶಾಸಕ ಸುರೇಶ್ ವಿರುದ್ಧ ಶಿವಲಿಂಗೇಗೌಡ ಕಿಡಿಕಾರಿದರು.
ಈ ವೇಳೆ ಶಿವಲಿಂಗೇಗೌಡರ ಮೇಲೆ ಸಿಟ್ಟಾದ ಶಾಸಕ ಎಚ್.ಕೆ.ಸುರೇಶ್, ನನಗೂ ಜಾವಗಲ್ ಗ್ರಾಮ ಸೇರುತ್ತದೆ, ನನಗೂ ಹಕ್ಕಿದೆ ಎಂದು ಆಕ್ರೋಶ ಹೊರಹಾಕಿದರು. ಮದ್ಯದಂಗಡಿ ತೆರೆದಿರುವವನು ಕೆ.ಎಂ.ಶಿವಲಿಂಗೇಗೌಡರ ಸ್ನೇಹಿತ ಎಂದು ಸುರೇಶ್ ಮೈಕ್ನಲ್ಲಿ ಹೇಳಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಓವರ್ ಆಗಿ ಆಡಬೇಡ.
ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು ಒಂದು ಮದ್ಯದಂಗಡಿಗೂ ಅನುಮತಿ ನೀಡಿಲ್ಲ. ಕಳೆದ ಸರ್ಕಾರದಲ್ಲಿ ಮದ್ಯದಂಗಡಿಗಳನ್ನು ತೆರೆದಿದ್ದಾರೆ.ಒಂದೆಡೆ ಶಿವಲಿಂಗೇಗೌಡರ ಪರ ಕಾರ್ಯಕರ್ತರು ಜೈಕಾರ ಕೂಗಿದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಸುರೇಶ್ ಪರ ಜೈಕಾರ ಕೂಗಿದರು. ಈ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧ್ಯಪ್ರವೇಶಿಸಿ, ಶಾಸಕರನ್ನು ಸಮಾಧಾನಪಡಿಸಿದರು.
ವೇದಿಕೆ ಮೇಲೆ ಶಾಸಕರ ನಡುವೆ ಕಿತ್ತಾಟದ ನಂತರ ಸಚಿವ ಕೆ.ಎನ್.ರಾಜಣ್ಣ ಭಾಷಣ ಮಾಡಿ ಶಾಸಕರಿಗೆ ಕಿವಿಮಾತು ಹೇಳಿದರು. ಶಾಸಕರು ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಬೇಲೂರಿನಲ್ಲೂ ಒಂದು ಜನತಾದರ್ಶನ ಕಾರ್ಯಕ್ರಮ ಮಾಡೋಣ. ಅಲ್ಲಿಗೂ ಅಧಿಕಾರಿಗಳು ಬರ್ತಾರೆ, ನಿಮ್ಮ ಸಮಸ್ಯೆಯೂ ಬಗೆ ಹರಿಯುತ್ತೆ. ಜನರ ಚಪ್ಪಾಳೆ ಹೊಡೆಸಲು ಭಾಷಣ ಮಾಡುವುದೇ ಬೇರೆ. ಅದನ್ನು ರಾಜಕೀಯ(political) ಭಾಷಣದಲ್ಲಿ ಮಾಡೋಣ ಎಂದು ಸಮಾಧಾನ ಪಡಿಸಿದರು.