ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಕಮಿಷನ್ ದಂಧೆ, ಭ್ರಷ್ಟಾಚಾರ ಆಡಳಿತ ಹಾಗೂ ಜನ ವಿರೋಧಿ ನಿಲುವು ಖಂಡಿಸಿ ಸುಳ್ಯ ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ‘ ಈ ಬಗ್ಗೆ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಹಿತಾಸಕ್ತಿಯ ವಿರುದ್ಧವಾಗಿ ವರ್ತಿಸುತ್ತಿದೆ.ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದಂತಹ ಹಲವು ಜನಪರ ಯೋಜನೆಗಳನ್ನು ರದ್ದುಗೊಳಿಸಿದೆ.ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸುವ ಕೆಲಸಗಳಾಗುತ್ತಿವೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಜನರಿಗೆ ವಂಚನೆಯನ್ನು ಮಾಡುತ್ತಿದೆ. ನಮ್ಮಲ್ಲಿ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಅಡಿಕೆ ಗಿಡಗಳಿಗೆ ಉಂಟಾಗಿರುವ ರೋಗಗಳಿಂದ ಪ್ರತಿ ದಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರ ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ. ನಮ್ಮ ಬಹುಮುಖ್ಯ ಬೇಡಿಕೆಯಾದ ೧೧೦ ಕೆವಿ ವಿದ್ಯುತ್ ವಿಚಾರವಾಗಿ ಸರ್ಕಾರ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ.ಇವರ ಜನ ವಿರೋಧಿ ನೀತಿಯಿಂದ ಬಿಜೆಪಿ ಪಕ್ಷವು ಕಳೆದ ನಾಲ್ಕು ತಿಂಗಳುಗಳಿಂದ ನಾಲ್ಕು ಬಾರಿ ಬೇರೆ ಬೇರೆ ಪ್ರತಿಭಟನೆಗಳನ್ನು ಮಾಡುವ ಅನಿವಾರ್ಯತೆಗೆ ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ‘ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಕಾಂಟ್ರಾಕ್ಟರ್ ಮನೆಯಲ್ಲಿ ರೂ ೪೨ ಕೋಟಿ ನಗದು ಹಣ ಐ ಟಿ ದಾಳಿಯಲ್ಲಿ ಸಿಕ್ಕಿದ್ದು ಬಾರಿ ಸುದ್ದಿಯಾಗಿತ್ತು. ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ಇದೀಗ ಪ್ರಚಲಿತವಾಗಿದೆ. ಕಾಂಗ್ರೆಸ್ ಸರ್ಕಾರ ಕಾಂಟ್ರಾಕ್ಟರ್ಗಳಿಗೆಂದು ನೀಡಿದ ಬಾಕಿ ಹಣ ರೂ ೬೫೦ ಕೋಟಿ ರೂ.ಗೆ ಪ್ರತಿಯಾಗಿ ಕಾಂಟ್ರಾಕ್ಟರ್ಗಳು ನೀಡಿದ ಕಮಿಷನ್ ಹಣ ಈ ೪೨ ಕೋಟಿ. ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ನಮ್ಮ ರಾಜ್ಯದ ಹಣವನ್ನು ಪಂಚ ರಾಜ್ಯ ಚುನಾವಣೆಯ ಖರ್ಚಿಗೆ ಕಾಂಗ್ರೆಸ್ ಉಪಯೋಗಿಸಲು ಹೊರಟಿದೆ ಎಂದು ಗುಡುಗಿದರು.
ಕಾಂಗ್ರೆಸ್ ಪಾಲಿಗೆ ಕರ್ನಾಟಕ ಕಲೆಕ್ಷನ್ ಕೇಂದ್ರವಾಗಿದೆ.ರಾಜ್ಯದ ಹಲವಾರು ಕಡೆಗಳಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ. ವಿದ್ಯುತ್ ಕಡಿತ ವಿಪರೀತವಾಗಿದೆ. ವರ್ಗಾವಣೆ ದಂಧೆ ಮಿತಿಮೀರಿದೆ. ತುಷ್ಟಿಕರಣದಲ್ಲಿ ಸರ್ಕಾರ ಮುಳುಗಿದ್ದು, ಇದರಿಂದ ಹೊರಬರಲು ಕಾಂಗ್ರೆಸ್ ಚಡಪಡಿಸುತ್ತಿದೆ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದರು. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡಿಂಜಿ ಮಾತನಾಡಿ, ‘ ಕಾಂಗ್ರೆಸ್ ಸರ್ಕಾರ ಕೇವಲ ನಾಲ್ಕು ತಿಂಗಳಲ್ಲಿಯೇ ಜನರಿಗೆ ಸಂಕಷ್ಟದ ಮೇಲೆ ಸಂಕಷ್ಟವನ್ನು ತರುತ್ತಿದೆ. ಇನ್ನು ಇವರು ಐದು ವರ್ಷ ಅಧಿಕಾರ ನಡೆಸಿದರೆ ರಾಜ್ಯದ ಜನರ ಪರಿಸ್ಥಿತಿ ಏನಾಗಬಹುದೆಂದು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯವಾಗಿದೆ.ಇವರ ಈ ದುರಾಡಳಿತದಿಂದ ಕಾಂಗ್ರೆಸ್ಸಿನವರಿಗೂ ಕೂಡ ಆತಂಕ ಎದುರಾಗಿದೆ ಎಂದರು. ಕಾಂಗ್ರೆಸಿನಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ಅವರವರೇ ಪರಸ್ಪರ ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಿ.ಎಂ ಮತ್ತು ಡೆಪ್ಯುಟಿ ಸಿ.ಎಂ ರಾಜೀನಾಮೆಯನ್ನು ಕೂಡಲೇ ನೀಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಸುಭೋದ್ ಶೆಟ್ಟಿ ಮೇನಾಲ, ಎ.ವಿ ತೀರ್ಥರಾಮ, ಪಿ.ಕೆ ಉಮೇಶ್, ಚನಿಯ ಕಲ್ತಡ್ಕ, ಜಗದೀಶ್ ಸರಳಿಕುಂಜ, ಸುನಿಲ್ ಕೇರ್ಪಳ, ವಿನಯ್ ಮುಳುಗಾಡು, ರವಿಚಂದ್ರ ಕೊಡಿಯಾಲಬೈಲು, ಜಿನ್ನಪ್ಪ ಪೂಜಾರಿ, ದಿನೇಶ್ ಅಡ್ಯಾರು, ಹೊನ್ನಪ್ಪ ಗೌಡ, ಕೇಶವ ಅಡ್ತಲೆ, ಗೋಪಾಲಕೃಷ್ಣ ನಡುಬೈಲು, ಪ್ರದೀಪ್ ಕೋಲ್ಚಾರು, ಸುರೇಶ್ ಕಣೆಮರಡ್ಕ, ಸೋಮನಾಥ ಪೂಜಾರಿ, ವಾಸುದೇವ ನಾಯಕ್, ಆನಂದರಾವ್ ಕಾಂತಮಂಗಲ, ಮಹೇಶ್ ರೈ ಮೇನಾಲ, ಕಮಲಾಕ್ಷ ರೈ ಮೇನಾಲ, ಅಶೋಕ್ ಪೀಚೆ, ಶಿವನಾಥರಾವ್ ಹಳೆಗೇಟು, ನಗರ ಪಂಚಾಯತಿ ಸದಸ್ಯರುಗಳಾದ ಶಿಲ್ಪಾ ಸುದೇವ್, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಮೋಹಿನಿ ನಾಗರಾಜ್, ಬೂಡು ರಾಧಾಕೃಷ್ಣ ರೈ, ಬುದ್ಧ ನಾಯ್ಕ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಂದಿಸಿದರು.