ನ್ಯೂಸ್ ನಾಟೌಟ್: ಇತ್ತೀಚೆಗೆ ಮಂಗಳೂರಿನ ವ್ಯಕ್ತಿಯೊಬ್ಬ ಪ್ಯಾಲೆಸ್ಟೇನ್ ಪರ ವಿಡಿಯೋ ಹರಿಬಿಟ್ಟದ್ದಕ್ಕಾಗಿ ದೂರು ದಾಖಲಾಗಿತ್ತು, ಈಗ ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಪ್ಯಾಲೆಸ್ಟೇನ್ಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಮಾಡಿದ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಕಾನ್ಸ್ಟೇಬಲ್ ಸುಹೈಲ್ ಅನ್ಸಾರಿ ಬರೇಲಿ ನಿವಾಸಿಯಾಗಿದ್ದು, ಅವರ ವಿರುದ್ಧ ಇಲಾಖಾ ತನಿಖೆ ಆರಂಭಿಸಲಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಲಖೀಂಪುರ್ ಖೇರಿಗೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.
ಕಾನ್ಸ್ಟೇಬಲ್ ಶೇರ್ ಮಾಡಿದ ಪೋಸ್ಟ್ ಕುರಿತಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.
ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಕುರಿತಂತೆ ಭಾರತದ ನಿಲುವಿಗೆ ವಿರುದ್ಧವಾಗಿ ಪೋಸ್ಟ್ ಮಾಡಿ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಕಳೆದ ವಾರ ಮುಖ್ಯಮಂತ್ರಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು.
ಇಸ್ರೇಲ್ ಗೆ ದಾಳಿ ನಡೆಸಿದ ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಮಂಗಳೂರಿನ ವ್ಯಕ್ತಿಯ ವಿಡಿಯೋ ಶನಿವಾರ ಎಲ್ಲೆಡೆ ವೈರಲ್ ಆಗಿತ್ತು.
ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳೆಂದು ಕರೆದ ಮಂಗಳೂರಿನ ಝಾಕಿರ್ ಹಮಾಸ್, ಉಗ್ರರರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದ್ದವನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ಯಾಲಿಸ್ಟೈನ್ , ಗಾಝಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸುವಂತೆ ಕರೆ ನೀಡಿರುವ ಝಾಕಿರ್ ಹಮಾಸ್ ಉಗ್ರರನ್ನು ದೇಶ ಪ್ರೇಮಿ ಯೋಧರೆಂದು ಬಣ್ಣಿಸಿದ್ದ ಬಗ್ಗೆ ತೀವ್ರ ಜನಾಕ್ರೋಶ ವ್ಯಕ್ತವಾಗಿತ್ತು.