ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆ ಮತ್ತೊಂದು ಪ್ರೇತಗಳ ಮದುವೆ ಮೂಲಕ ಸುದ್ದಿಯಾಗಿದೆ.ಹೌದು, ಇಪ್ಪತ್ತೈದು ವರ್ಷಗಳ ಹಿಂದೆ ಮೃತಪಟ್ಟ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿಗೆ ಇತ್ತೀಚೆಗೆ ಮದುವೆ ನಡೆಯಿತು.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಪಾದೆ ಮನೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಎಳೆ ಪ್ರಾಯದಲ್ಲಿ ಇಬ್ಬರು ಗಂಡು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು.ಬಳಿಕ ದಂಪತಿಗೆ ಮೂರನೇ ಗಂಡು ಮಗು ಜನಿಸಿತ್ತು.ಇದೀಗ ಆ ಗಂಡಿಗೆ ಮದುವೆ ಪ್ರಾಯ ಸಮೀಪಿದೆ.
ಎಷ್ಟೇ ಹುಡುಕಾಡಿದರೂ ಏನೇ ಮಾಡಿದರೂ ಹುಡುಗಿ ಸೆಟ್ ಆಗಿರಲಿಲ್ಲ.ಹೀಗಾಗಿ ಇದರಿಂದ ನೊಂದ ಮನೆಯವರು ಏನು ಮಾಡಬೇಕೆಂದು ತೋಚದಾದರು. ಹೀಗಿದ್ದಾಗ ಒಂದು ದಿನ ಗಂಡಿನ ಕಡೆಯಲ್ಲಿ ಒಬ್ಬರಿಗೆ ಮೈಮೇಲೆ ದರುಶನ ಬಂತು. ದರ್ಶನದ ಸಮಯದಲ್ಲಿ ಗಂಡಿಗೆ ಮದುವೆಯ ಯೋಗ ಬರಬೇಕಿದ್ದರೆ ಹಿಂದೆ ತೀರಿಹೋದ ಮಕ್ಕಳಿಗೆ ಮದುವೆ ಮಾಡಿಸಬೇಕು ಎಂದು ದರ್ಶನ ಬಂದವರು ಹೇಳಿದರು.
ಹೀಗೆ ಸ್ವಲ್ಪ ದಿನ ಕಳೆದು ಹೆಣ್ಣುಗಳ ಹುಡುಕಾಟ ಆರಂಭಗೊಂಡಿತು. ಶಿರ್ಲಾಲು ಎಂಬಲ್ಲಿ ನಡದಲ್ಲಿ ನಡೆದಂತೆ ಎರಡು ಹೆಣ್ಣು ಮಕ್ಕಳು ಎಳೆ ಪ್ರಾಯದಲ್ಲಿ ಅಸುನೀಗಿದ್ದರು. ಅವರಿಗೂ ಕುಟುಂಬದಲ್ಲಿ ಸಮಸ್ಯೆ ತಲೆದೋರಿತ್ತು. ಎರಡೂ ಮನೆಯವರು ಪರಸ್ಪರ ಮಾತುಕತೆ ಮಾಡಿಕೊಂಡರು. ಎರಡೂ ಕುಟುಂಬದವರು ಕೂಡ ಗೌಡ ಸಮುದಾಯಕ್ಕೆ ಸೇರಿದವರು ಅನ್ನೋದೇ ವಿಶೇಷ. ಹೀಗೆ ಎಲ್ಲವೂ ಸುಸೂತ್ರವಾಗಿಯೇ ಇದ್ದುದರಿಂದ ಎರಡು ಜೋಡಿ ಪ್ರೇತಾತ್ಮಗಳಿಗೆ ಶಿವಣ್ಣ ಗೌಡ ಮದುವೆ ಮಾಡಿಸುವಲ್ಲಿ ಯಶಸ್ವಿಯಾದರು.
ಸಾಧಾರಣವಾಗಿ ಮಾಮೂಲಿ ಮದುವೆಗಳಿಗಿಂತ ಇದು ಭಿನ್ನವಾಗಿರುತ್ತೆ.ಮಾಮೂಲಿ ಮದುವೆಗೆ ನೂರಾರು ಜನರನ್ನು ಮದುವೆಗೆ ಆಹ್ವಾನಿಸಿದಂತೆ ಮದುವೆಗೆ ಜನ ಆಗಮಿಸುತ್ತಾರೆ.ಇಲ್ಲಿ ಅಡಕೆ ಹಿಂಗಾರಕ್ಕೆ ಪ್ರೇತಗಳನ್ನು ಆಹ್ವಾನಿಸಲಾಗುತ್ತದೆ. ಬಳಿಕ ನಾಲ್ಕೂ ಹಿಂಗಾರಗಳನ್ನು ಒಂದೆಡೆ ಇಟ್ಟು ನಿಶ್ಚಿತಾರ್ಥ ನೆರವೇರಿಸಲಾಗುತ್ತದೆ. ಕೆಲ ದಿನಗಳ ಬಳಿಕ ಮದರಂಗಿ ಶಾಸ್ತ್ರ ನಡೆಸಲಾಗುತ್ತದೆ.
ನಂತರ ಶುಭ ಮೂಹೂರ್ತದಲ್ಲಿ ನಾಲ್ಕೂ ಹಿಂಗಾರಗಳಿಗೆ ಮದುವೆಯಲ್ಲಿರುವಂತೆ ಅಲಂಕಾರಗಳನ್ನು ಮಾಡಲಾಗುತ್ತದೆ. ಹೆಣ್ಣು ಪ್ರೇತವನ್ನು ಉಂಗುರ, ಚೈನು, ಬಳೆ ಮಾಲೆ ಇತ್ಯಾದಿಗಳೊಂದಿಗೆ ಶೃಂಗರಿಸುತ್ತಾರೆ. ಬಳಿಕ ಪರಸ್ಪರ ಜೊತೆಗೂಡಿಸಲಾಗುತ್ತದೆ. ಗೌಡ ಸಮುದಾಯದ ಕಟ್ಟುಕಟ್ಟಳೆಯ ಪ್ರಕಾರ ಶಾಸ್ತ್ರೋಕ್ತವಾಗಿ ಧಾರೆ ಎರೆದುಕೊಡಲಾಗುತ್ತದೆ. ಬಳಿಕ ಊಟೋಪಚಾರಗಳೊಂದಿಗೆ ಮದುವೆ ಮುಗಿಯುತ್ತದೆ.ಇಲ್ಲಿಗೆ ಮದುವೆ ಕಾರ್ಯಕ್ರಮ ಮುಗಿಯುತ್ತದೆ.