ನ್ಯೂಸ್ ನಾಟೌಟ್: ನಾನು ಚಿಕ್ಕವನಾಗಿದ್ದಾಗ ನಮ್ಮ ಅಪ್ಪ ದಸರಾಗೆ ಕರೆದುಕೊಂಡು ಬಂದಿದ್ದರು. ನಾನು ನನ್ನ ಅಪ್ಪನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದೆ ಎಂದು ತಮ್ಮ ದಸರಾ ನೆನಪನ್ನು ಮೆಲುಕು ಹಾಕಿದರು. ದೊಡ್ಡವನಾದ ಮೇಲೆ ಪ್ರತಿವರ್ಷ ದಸರಾ ನೋಡಿದ್ದೇನೆ. ವಸ್ತುಪ್ರದರ್ಶನಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ದಸರಾ ನಮ್ಮ ಸಂಸ್ಕೃತಿ ಪ್ರತೀಕ. ಹಾಗಾಗಿ ಈ ಮಹೋತ್ಸವ ಸದಾ ಕಾಯಬೇಕು ಎಂದು ಆಶಿಸಿದರು.
ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ದಸರಾ ಮೆರವಣಿಗೆ ಮೂಲಕ ಮಾಡುತ್ತೇವೆ. ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ನಾಡಿನ ಸಂಪತ್ತು, ಅಧಿಕಾರ ಎಲ್ಲಾ ವರ್ಗದ ಜನರಿಗೂ ಹಂಚಿಕೆ ಆಗಬೇಕು. ಎಲ್ಲಾ ವರ್ಗದ ಜನರಿಗೂ ಎಲ್ಲಾ ಅವಕಾಶ ಸಿಗಬೇಕು. ಅದು ನಿಜವಾದ ಸಾಮಾಜಿಕ ನ್ಯಾಯ. ಸರ್ಕಾರ ಐದು ಗ್ಯಾರಂಟಿಗಳನ್ನು ಬದ್ಧತೆಯಿಂದ ಘೋಷಿಸಿ ಜಾರಿ ಮಾಡುತ್ತಿದೆ. ಐದನೇ ಗ್ಯಾರಂಟಿ ಮುಂದಿನ ಜನವರಿಯಲ್ಲಿ ಮಾಡುತ್ತೇವೆ. ದಸರಾ ಮಹತ್ವಕ್ಕೆ ಕುಂದು ಬಾರದಂತೆ ಸಾಂಪ್ರದಾಯಿಕ ದಸರಾ ಮಾಡುತ್ತಿದ್ದೇವೆ ಎಂದು ನುಡಿದರು.
ಕಲೆ, ಸಂಸ್ಕೃತಿ, ಸಂಪ್ರದಾಯ ನಮ್ಮ ನಾಡಿನಲ್ಲಿ ಶ್ರೀಮಂತವಾಗಿದೆ. ಕರ್ನಾಟಕ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕುವುದು ಮುಖ್ಯ. ದೇಶ ಮತ್ತು ರಾಜ್ಯಕ್ಕೆ ಇದು ತುಂಬಾ ಅಗತ್ಯ ಎಂದು ಹೇಳಿದರು.
ಸಮಾಜದಲ್ಲಿ ಜಾತಿ ತಾರತಮ್ಯ ಇರಬಾರದು. ಎಲ್ಲರನ್ನೂ ಗೌರವ ಪ್ರೀತಿಯಿಂದ ಕಾಣಬೇಕಿದೆ. ಭಾರತದ ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಸಂವಿಧಾನದ ಉದ್ದೇಶ ಈಡೇರಿಸುವುದು ಪ್ರತಿ ಸರ್ಕಾರದ ಕರ್ತವ್ಯ. ಈ ನಾಡಿನ ಸಂಪತ್ತು ಎಲ್ಲರಿಗೂ ಹಂಚಿಕೆ ಆಗಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಜನರಿಗೆ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಜನವರಿಯಲ್ಲಿ 5ನೇ ಗ್ಯಾರಂಟಿ ಈಡೇರಿಸಲಾಗುವುದು ಎಂದು ಹೇಳಿದರು.
2022-23ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿದವರಿಗೆ 6 ತಿಂಗಳ ಗ್ರೇಸ್ ಪಿರಿಯಡ್ ಇರುತ್ತದೆ. ಆರು ತಿಂಗಳ ನಂತರವೂ ಕೆಲಸ ಸಿಗದಿದ್ದರೆ 24 ತಿಂಗಳುಗಳ ಕಾಲ ಪಧವೀಧರರಿಗೆ ಮಾಸಿಕ 3ಸಾವಿರ ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುವುದು. 6 ತಿಂಗಳ ಒಳಗೆ ಖಾಸಗಿ/ಸರ್ಕಾರಿ ಕೆಲಸ ದೊರೆತರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಕೆಲಸ ಸಿಕ್ಕರೂ ಕೂಡ ಅಂತಹವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎನ್ನಲಾಗಿತ್ತು, ಈಗ ಸಿಎಂ ಜನವರಿಯಲ್ಲಿ ಇದನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.