ನ್ಯೂಸ್ ನಾಟೌಟ್: ಅನಾರೋಗ್ಯಕ್ಕೀಡಾದ ಮುಸ್ಲಿಂ (Muslim) ಸಮುದಾಯಕ್ಕೆ ಸೇರಿದ ಆಪ್ತ ಸ್ನೇಹಿತನ ಆರೋಗ್ಯ ಸುಧಾರಣೆಗೆ ಹಿಂದೂ (Hindu) ವ್ಯಕ್ತಿಯೊಬ್ಬರು ಧರ್ಮಸ್ಥಳದ (Dharmasthala) ಮಂಜುನಾಥ ದೇವಾಲಯದಲ್ಲಿ ತುಲಾಭಾರ (Tulabhara) ಮಾಡಿಸಿದ ಘಟನೆ ಇಂದು(ಅ.15) ವರದಿಯಾಗಿದೆ.
ಅನಿಸ್ ಪಾಷ ಹಾಗೂ ಅರುಣ್ ಕುಮಾರ್ ಇಬ್ಬರು ಹಲವು ವರ್ಷಗಳಿಂದ ಪ್ರಾಣ ಸ್ನೇಹಿತರಾಗಿದ್ದಾರೆ. ದಾವಣಗೆರೆ (Davangere) ನಗರದಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಅನಿಸ್ ಪಾಷ ಅರುಣ್ ಗೆ ಸಂಬಂಧಿಸಿದ ಕೇಸ್ ವೊಂದನ್ನು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ಗೆದ್ದು ಬೀಗಿದ್ದರು. ದುರಂತ ಎಂದರೆ ಕೋವಿಡ್ ವೇಳೆ ಅನಿಸ್ ಪಾಷ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದರು.
ಇದರಿಂದ ಚಿಂತಿತರಾದ ಸ್ನೇಹಿತ ಅರುಣ್ ಕುಮಾರ್ ಪ್ರಾಣ ಸ್ನೇಹಿತ ಬಹುಬೇಗ ಗುಣಮುಖರಾಗಲಿ ಎಂದು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಲಾಭಾರದ ಹರಕೆ ಹೊತ್ತಿದ್ದರು ಎನ್ನಲಾಗಿದೆ.
ಇದೀಗ ಪ್ರಾಣಸ್ನೇಹಿತ ಅನಿಸ್ ಪಾಷಾ ಗುಣಮುಖರಾಗಿದ್ದು, ಇದರ ಬೆನ್ನಲ್ಲೇ ಅರುಣ್ ಕುಮಾರ್ ಅನಿಸ್ ಪಾಷ ಅವರನ್ನು ಮೊದಲಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕರೆದೊಯ್ದು ದರ್ಶನ ಮಾಡಿಸಿ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥನ ಸನ್ನಿಧಿಯಲ್ಲಿ ಅಭಿಷೇಕ ನಡೆಸಿ ಬಳಿಕ ಅಕ್ಕಿ, ಬೆಲ್ಲ, ಕೊಬ್ಬರಿ ಮೂಲಕ ತುಲಾಭಾರ ಮಾಡಿಸಿ ಹರಕೆ ತೀರಿಸಿದ್ದಾರೆ. ಈ ಘಟನೆ ಕೋಮು ಸೌಹಾರ್ದಕ್ಕೆ ಮಾದರಿಯಾಗಿದೆ.
ನಿಮ್ಮ ಧರ್ಮವನ್ನು ಪ್ರೀತಿಸಿ ಬೇರೊಬ್ಬರ ಧರ್ಮವನ್ನು ಗೌರವಿಸಿ ಎಂದು ನಮ್ಮ ಇಸ್ಲಾಂ ಧರ್ಮ ಹೇಳುತ್ತದೆ. ಇದಲ್ಲದೆ ಅನಾಥ ಮಕ್ಕಳ ಮುಂದೆ ತಮ್ಮ ಮಕ್ಕಳನ್ನು ಮುದ್ದಾಡಬೇಡಿ ಎಂದು ಪ್ರವಾದಿಯವರು ಹೇಳುತ್ತರೆ.
ಅದರಂತೆ ನನ್ನ ಧರ್ಮ, ಆಚರಣೆಗಳು ಬೇರೆಯಾದರೂ ಅರುಣ್ ಅವರ ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹರಕೆ ನೆರವೇರಿಸಿದ್ದೇನೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎಂಬ ಖುರಾನ್ ಸಾಲುಗಳಂತೆ ನಾವು ಎಲ್ಲರೊಳಗೆ ಒಂದಾಗಿ ಬದುಕುತ್ತಿದ್ದೇವೆ ಎಂದು ಅನಿಸ್ ಪಾಷಾ ಹೇಳಿದ್ದಾರೆ.