ನ್ಯೂಸ್ ನಾಟೌಟ್ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ 2023-24 ನೇ ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ಮತ್ತು ಕೃಷಿ ಯಂತ್ರೋಪಕರಣಗಳ ವಿತರಣಾ ಕಾರ್ಯಕ್ರಮ ನಡೆಯಿತು.ಅ.14 ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರಾರು ಮಂದಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಕೃಷಿ ಯಂತ್ರೋಪಕರಣಗಳ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.2023-24 ನೇ ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ವಿದ್ಯುಕ್ತ ಚಾಲನೆಯನ್ನು ನೀಡಿದರು.
ವಾರ್ಷಿಕ ಸಸಿ ವಿತರಣಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ನೆರವೇರಿಸಿದರು.ಕೃಷಿ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರು ಹಾಗೂ ಕೃಷಿ ವಿಸ್ತರಣಾ ಕಾರ್ಯಕ್ರಮಗಳ ಮಾಹಿತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಮಲ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಟ್ರಸ್ಟಿ ಸಂಪತ್ ಸಾಮ್ರಾಜ್ಯ,ಜಂಟಿ ಕೃಷಿ ನಿರ್ದೇಶಕ ಡಾ. ಹೆಚ್ ಕೇಂಪೆಗೌಡ,ಶ್ರೀ ಕ್ಷೇತ್ರ.ಧ.ಗ್ರಾ. ಯೋಜನೆಯ ಮುಖ್ಯ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಉಪಸ್ಥಿತರಿದ್ದರು.
ಬೆಳಾಲಿನ ಜಿನ್ನಮ್ಮ ಅವರಿಗೆ ಹಾಲು ಕರೆಯುವ ಯಂತ್ರ,ಹುಣೆಕಟ್ಟೆಯ ವಿಶಾಲಾಕ್ಷಿ ಅವರಿಗೆ ಪವರ್ ಸ್ಪೇಯರ್,ಮೆಲಂತ ಬೆಟ್ಟು ಶ್ವೇತಾಗೆ ಕಳೆ ತೆಗೆಯುವ ಯಂತ್ರ,ನಾವೂರಿನ ಚಂದ್ರಹಾಸ್ ರಿಗೆ ನೀರಿನ ಪಂಪ್,ಹೊಸಂಗಡಿಯ ಲಕ್ಷ್ಮಿ ಅವರಿಗೆ ಗುಂಡಿ ತೆಗೆಯುವ ಯಂತ್ರ, ಗರ್ಡಾಡಿ ವಸಂತ ಪೂಜಾರಿಗೆ ಮರ ಹತ್ತುವ ಯಂತ್ರ, ಕಾಯರ್ತಡ್ಕದ ರಮ್ಯಾ ಅವರಿಗೆ ಗೋಬರ್ ಗ್ಯಾಸ್,ಬೈಪಾಡಿಯ ಶೋಭಾ ಅವರಿಗೆ ಅಡಕೆ ಹಾಳೆ ಘಟಕ,ನಾರಾವಿ ಪ್ರಶಾಂತ್ ಅವರಿಗೆ ಯಂತ್ರಶ್ರೀ ನರ್ಸರಿ,ಮಳೆ ಬೆಟ್ಟು ಪ್ರವೀಣ್ ಅವರಿಗೆ ಮಿನಿ ಡೈರಿ ಘಟಕ,ವೇಣೂರಿನ ಅಣ್ಣಿ ಪೂಜಾರಿ,ನಾರವಿಯ ರವಿ ಎಂಕೆ,ಕಡಿರುದ್ಯಾವರಾದ ಹರಿಣಿ ಅವರಿಗೆ ಸಸಿ ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ| ಎಲ್.ಹೆಚ್ ಮಂಜುನಾಥ್ ಸ್ವಾಗತಿಸಿದರು. ಸುನೀಲ್ ಕಳ್ಕೊಪ್ಪ ಮತ್ತು ತಂಡದವರು ಪ್ರಾರ್ಥನೆ ಹಾಡಿದರು.ಕೃಷಿ ಅಧಿಕಾರಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಯೋಜನಾಧಿಕಾರಿ ಸುರೇಂದ್ರ ವಂದಿಸಿದರು.