ನ್ಯೂಸ್ ನಾಟೌಟ್: ಡ್ರೋನ್ ವಿಚಾರದಲ್ಲಿ ವಿಪರೀತ ಟ್ರೋಲ್ ಗೆ ಒಳಗಾಗಿರುವ ಡ್ರೋನ್ ಪ್ರತಾಪ್ ಬಗೆಗಿನ ಜನಾಭಿಪ್ರಾಯ ಇದೀಗ ನಿಧಾನವಾಗಿ ಬದಲಾಗುತ್ತಿದೆ. ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯಲ್ಲಿ ಪ್ರತಾಪ್ ಅನ್ನು ಸ್ಪರ್ಧಿಗಳು ವಿಪರೀತವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಬಾಯಿ ಮುಚ್ಚಿಸುತ್ತಿದ್ದಾರೆ. ಇಂತಹ ಪ್ರಯತ್ನಗಳಿಂದ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅನ್ನು ಹಿಯ್ಯಾಳಿಸುತ್ತಿರುವ ಸ್ಪರ್ಧಿಗಳ ನಡೆಯನ್ನು ಸ್ವತಃ ಜನರೇ ಈಗ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.
ಪ್ರತಾಪ್ ಮತ್ತು ವರ್ತೂರ್ ಸಂತೋಷ್ ಅವರ ಜಗಳವೂ ಡ್ರೋನ್ ವಾದದಲ್ಲಿ ಮುಗಿದು ಹೋಯಿತು. ಸ್ನೇಹಿತ್ ಅವರು ಡ್ರೋನ್ ಅನ್ನು ‘ಡೋಂಗಿ’ ಎನ್ನುವ ಮೂಲಕ ಪ್ರತಾಪ್ ಅವರು ತಿರುಗಿ ವಾದ ಮಾಡದಂತೆ ಯಶಸ್ವಿಯಾಗಿ ಬಾಯಿ ಮುಚ್ಚಿಸಿದ್ದಾರೆ.
‘ಅಡುಗೆ ಮಾಡುವಾಗ ಸ್ವಚ್ಚತೆ ಕಾಪಾಡುತ್ತಿಲ್ಲ’ ಎಂದು ವಿನಯ್ ಅವರು ಹೇಳಿದ್ದಾರೆ ಎಂದು ಪ್ರತಾಪ್ ಅವರು ಆರೋಪ ಮಾಡಿದ್ದು, ಇದನ್ನು ವಿನಯ್ ನಿರಾಕರಿಸಿದ್ದಾರೆ. ‘ಡ್ರೋನ್ನ ರೆಕ್ಕೆ ಪುಕ್ಕ ಎಲ್ಲ ಮುರಿತಿನಿ’ ಎನ್ನುವ ಮೂಲಕ ವಿನಯ್, ಪ್ರತಾಪ್ ಅವರಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದಂತೆ ನಡೆದುಕೊಂಡಿದ್ದಾರೆ. ಆರೋಪವನ್ನು ಹಿಂದಕ್ಕೆ ತೆಗೆದುಕೊಳ್ಳಲು ಒಪ್ಪದ ಪ್ರತಾಪ್, ಸುದೀಪ್ ಅವರ ಮಧ್ಯೆ ಪ್ರವೇಶವೇ ಇದಕ್ಕೆ ಪರಿಹಾರ ಎಂದು ಹೇಳಿ ಅಲ್ಲಿಂದ ತೆರಳಿದರು.
ಇನ್ನು ತುಕಾಲಿ ಸಂತೋಷ್ ಅವರ ಗುರಿಯೇ ಡ್ರೋನ್ ಪ್ರತಾಪ್ ಎನ್ನುವ ಹಾಗೆ ಇದೆ. ಈ ವಾರವಿಡಿ ಪ್ರತಾಪ್ ಅವರ ಕಾಲೆಳೆಯುವ ಮೂಲಕ ತಮಾಷೆ ಮಾಡಿರುವುದು ನೋಡಬಹುದು. ಸಂತೋಷ್ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಸ್ಯ ಎಂದರೆ ಇನ್ನೊಬ್ಬರನ್ನು ತಮಾಷೆ ಮಾಡುವುದಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.