ನ್ಯೂಸ್ ನಾಟೌಟ್: ಕೆಲವೊಂದು ಸಲ ಏನೋ ಮಾಡಲು ಹೋಗಿ ಮತ್ತೇನೋ ಆಗುವುದಿದೆ. ಅಂತಹುದೇ ಒಂದು ಸ್ವಾರಸ್ಯಕರ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿಯಿಂದ ಶುಕ್ರವಾರ ಸಂಜೆ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಗೋವುಗಳ ಅಕ್ರಮ ಸಾಗಾಟ ಪ್ರಕರಣ ಹೆಚ್ಚುತ್ತಿದೆ. ಸರ್ಕಾರ ಗೋವುಗಳನ್ನು ಕಾನೂನುಬದ್ಧ ರೀತಿಯಲ್ಲಿ ಸಾಗಿಸುವ ಅವಕಾಶವನ್ನು ನೀಡಿದೆ. ಆದರೆ ಕೆಲವರು ಯಾರದ್ದೋ ಹಟ್ಟಿಯಿಂದ ಗೋವುಗಳನ್ನು ಕದ್ದು ಅದನ್ನು ಅಕ್ರಮವಾಗಿ ಸಾಗಿಸಿ ಕಟುಕನ ಕೈಗೊಪ್ಪಿಸಿ ಹಣ ಎಣಿಸುವ ಕಾರ್ಯ ನಡೆಸುತ್ತಿದ್ದಾರೆ. ಇಂತಹದ್ದನ್ನು ವಿರೋಧ ಮಾಡುವ ಒಂದಷ್ಟು ಸಂಘಟನಾ ಶಕ್ತಿಗಳು ಕೂಡ ಈಗ ಬಲಗೊಂಡಿದೆ.
ಈ ಜಾಗೃತಿ ಚಾಲ್ತಿಯಲ್ಲಿರುವ ಸಂದರ್ಭದಲ್ಲಿಯೇ ಶುಕ್ರವಾರ ಸುಳ್ಯದಿಂದ ಲಾರಿಯೊಂದು ಪಾಸ್ ಆಗುತ್ತದೆ. ಇದರಲ್ಲಿ ಗೋವುಗಳನ್ನು ಕದ್ದು ಸಾಗಿಸಲಾಗುತ್ತಿದೆ ಅನ್ನುವ ಅನುಮಾನ ವ್ಯಕ್ತವಾಗಿದೆ. ತಕ್ಷಣ ಒಂದಷ್ಟು ಮಂದಿ ಕಾರ್ಯಪ್ರವೃತ್ತರಾಗಿ ಲಾರಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕಲ್ಲುಗುಂಡಿಯ ಕೂಲಿ ಶೆಡ್ ಬಳಿ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ.
ಪೊಲೀಸ್ ಠಾಣೆ ಸಮೀಪ ಬ್ಯಾರಿಕೇಡ್ ಹಾಕಿ ಸಿನಿಮೀಯ ಶೈಲಿಯಲ್ಲಿ ಲಾರಿಯನ್ನು ಅಡ್ಡ ಹಾಕಲಾಗಿದೆ. ಎಷ್ಟು ಗೋವುಗಳು ಇರಬಹುದೆಂದು ತಪಾಸಣೆ ನಡೆಸಲಾಗಿದೆ. ಈ ವೇಳೆ ಗೋವುಗಳ ಬದಲು ಲಾರಿ ತುಂಬಾ “ಆಡಿನ ಪಿಟ್ಟೆ” ಸಿಕ್ಕಿದೆ. ಇದನ್ನು ನೋಡಿದ ಬಳಿಕ ಎಲ್ಲರ ಕೋಪವು, ಅನುಮಾನವೂ ತಣ್ಣಗಾಗಿದೆ. ಪ್ರಕರಣ ಸುಖಾಂತ್ಯದಲ್ಲಿ ಕೊನೆಗೊಂಡಿದೆ. ಬಳಿಕ ಲಾರಿಯನ್ನು ಬಿಟ್ಟು ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.