ನ್ಯೂಸ್ ನಾಟೌಟ್: ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆ(Megan Hospital) ಯ ಹೆರಿಗೆ ವಾರ್ಡ್ನಲ್ಲಿ ಮಗು ಅದಲು ಬದಲು ಆಗಿದೆ ಎನ್ನುವ ಗೊಂದಲ. ಹೌದು,ಶಿಕಾರಿಪುರದ ಸಬೀನ್ ಬಾನು ಎಂಬುವವರಿಗೆ ಅ.12ರಂದು ಹೆರಿಗೆ ಆಗಿತ್ತು. ತಾಯಿ ಮತ್ತು ತಂದೆ ಕುಟುಂಬಸ್ಥರಿಗೆ ನಿಮಗೆ ಗಂಡು ಮಗು ಆಗಿದೆ ಎಂದಿದ್ದಾರೆ.ಈ ಸುದ್ದಿಯಿಂದ ದಂಪತಿ ಭಾರಿ ಸಂತೋಷ ವ್ಯಕ್ತ ಪಡಿಸಿದ್ದರು.ಒಂದು ಗಂಟೆ ಕಳೆದು ಗಂಡು ಮಗು ನಿಮ್ಮದಲ್ಲ, ನಿಮಗೆ ಹೆಣ್ಣು ಮಗು ಆಗಿದೆ ಎಂದು ಗಂಡು ಮಗುವನ್ನು ವಾಪಸ್ ತೆಗೆದುಕೊಂಡು ಹೋಗಿದ್ದು,ಹೆಣ್ಣು ಮಗು ನೀಡಿದ್ದಾರೆ.ಹಾಗಾದರೆ ಏನಿದು ಈ ಮಹಾ ಯಡವಟ್ಟು?
ಹೌದು, ನವಜಾತ ಶಿಶುವಿಗೆ ಕೈಗೆ ಹಾಕಿದ ಟ್ಯಾಗ್ನಿಂದಾಗಿ ಈ ಯಡವಟ್ಟು ಸಂಭವಿಸಿದೆ ಎಂದು ಹೇಳಲಾಗಿದೆ.ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಮಗು ಹುಟ್ಟಿದ ತಕ್ಷಣ ಯಾವ ಮಗು ಮತ್ತು ತಾಯಿಯ ಹೆಸರು ಟ್ಯಾಗ್ ಮೇಲೆ ಬರೆಯುತ್ತಾರೆ.ಹೀಗೆ ಸಬೀನಾಗೆ ಗಂಡು ಮಗು ಆಗಿದೆ ಎನ್ನುವ ಟ್ಯಾಗ್ ಕೈಮೇಲೆ ಇತ್ತು. ಆದ್ರೆ, ಕೇವಲ ಒಂದೇ ಗಂಟೆಯಲ್ಲಿ ಗಂಡು ಮಗು ಸಬೀನಾದಲ್ಲ ಅದು ಕಾವ್ಯ ಎನ್ನುವ ತಾಯಿಯದ್ದು ಎನ್ನುವುದು ಗೊತ್ತಾಗಿದೆ.
ಹಾಗಾದರೆ ಸಬೀನಾಗೆ ಹೆಣ್ಣು ಮಗು ಆಗಿದ್ದು ನಿಜನಾ? ಆ ಹೆಣ್ಣು ಮಗುವನ್ನು ಸಬೀನಾಗೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ಮುಂದಾಗಿದ್ಯಾಕೆ?ಎನ್ನುವ ಗೊಂದಲ ಆರಂಭವಾಗಿತ್ತು.ಬಳಿಕ ಸಬೀನಾ ಪತಿ ಮತ್ತು ಕುಟುಂಬಸ್ಥರು ವಿರೋಧ ಮಾಡಿದ್ದಾರೆ. ತನ್ನ ಪತ್ನಿಗೆ ಗಂಡು ಆಗಿದೆ. ಮಗುವಿನ ಕೈಮೇಲೆ ಟ್ಯಾಗ್ ಕೂಡಾ ಆಸ್ಪತ್ರೆಯವರೇ ಹಾಕಿದ್ದಾರೆ. ಈಗ ಹೆಣ್ಣು ಮಗು ಎಂದು ಸುಳ್ಳು ಹೇಳುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಈ ಸುದ್ದಿ ಹಬ್ಬುತ್ತಿದ್ದಂತೆ ಹೆರಿಗೆ ವಾರ್ಡ್ ಮುಂದೆ ಜನ ಜಮಾಯಿಸಿದರು. ಮೆಗ್ಗಾನ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ಶುರುಮಾಡಿದರು. ನಮ್ಮ ಮಗು ಯಾವುದು ಎನ್ನುವುದನ್ನು ವೈದ್ಯರೇ ತೀರ್ಮಾನ ಮಾಡಲಿ. ಮೊದಲು ಗಂಡು ಮಗು ಎಂದು ಹೇಳಿ, ಈಗ ಹೆಣ್ಣು ಮಗು ಎಂದು ಹೇಳುತ್ತಿದ್ದಾರೆ. ಹೆರಿಗೆ ವಾರ್ಡ್ನಲ್ಲಿ ಸಿಬ್ಬಂದಿ ಮಾಡಿದ ತಪ್ಪಿನಿಂದ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ಗಂಡು ಮತ್ತು ಹೆಣ್ಣು ಮಗು ಎನ್ನುವ ಗೊಂದಲ ಸೃಷ್ಟಿ ಮಾಡಿದ್ದು,ಇದಕ್ಕೆ ಆಸ್ಪತ್ರೆಯವರೇ ನೇರ ಹೊಣೆ ಎಂದು ಸಬೀನಾ ಪತಿ ಮತ್ತು ಅವರ ತಾಯಿ ನೇರವಾಗಿ ಆರೋಪ ಮಾಡಿದ್ದಾರೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಹುಟ್ಟಿದ ನವಜಾತ ಶಿಶುವಿನ ಕೈಗೆ ಟ್ಯಾಗ್ ತಪ್ಪಾಗಿ ಹಾಕಿದ್ದರಿಂದ ಈ ಗಂಡು ಮತ್ತು ಹೆಣ್ಣು ಮಗುವಿನ ಗೊಂದಲ ಶುರುವಾಗಿತ್ತು ಎನ್ನಲಾಗಿದೆ. ಕಾವ್ಯ ಎನ್ನುವ ಮಹಿಳೆಗೆ ಗಂಡು ಮಗು ಆಗಿದೆ. ಆ ಮಗುವಿನ ಕೈಗೆ ಕಾವ್ಯ ತಾಯಿಯ ಹೆಸರು ಬರೆಯುವ ಬದಲಿಗೆ ಸಬೀನಾ ಎಂದು ಬರೆದಿದ್ದಾರೆ. ಅದರ ಬಳಿಕ ಮಗುವಿನ ತಂದೆ ಮತ್ತು ಸಂಬಂಧಿಗಳಿಗೆ ಗಂಡು ಮಗುವನ್ನು ತೋರಿಸಿದ್ದಾರೆ.ಸ್ವಲ್ಪ ಹೊತ್ತು ಆದ ಬಳಿಕ ಕಾವ್ಯಾಗೆ ಹೆಣ್ಣು ಮಗುವನ್ನು ಕೊಡಲು ಹೋಗಿದ್ದಾರೆ. ಕಾವ್ಯ ತನಗೆ ಗಂಡು ಆಗಿತ್ತು. ಹೆಣ್ಣು ಮಗು ಯಾಕೇ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಗಲಿಬಿಲಿಯಾದ ಸಿಬ್ಬಂದಿ ಗಂಡು ಮಗು ಹುಡುಕಾಡಿದ್ದಾರೆ. ಅದು ಆಗಲೇ ಸಬೀನಾ ಕುಟುಂಬಸ್ಥರ ಕೈ ಸೇರಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಸಬೀನಾ ಕುಟುಂಬಸ್ಥರಿಂದ ಮಗುವನ್ನು ಸಿಬ್ಬಂದಿ ಹಿಂದಕ್ಕೆ ತೆಗೆದುಕೊಂಡಿದ್ದು, ಸಬೀನಾ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಗಲಾಟೆಯ ಬಳಿಕ ಮೆಗ್ಗಾನ್ ಜಿಲ್ಲಾಸ್ಪತ್ರೆ ಅಧಿಕಾರಿಗಳು ನಿದ್ರೆಯಿಂದ ಎದ್ದಿದ್ದಾರೆ. ಹೆರಿಗೆ ಆದ ಬಳಿಕ ಇಬ್ಬರು ಬಾಣಂತಿಯರಿಗೆ ಆಗಿರುವ ಮಗುವನ್ನು ತೋರಿಸಿದ್ದಾರೆ. ಕಾವ್ಯಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗು ಎನ್ನುವ ಮಾಹಿತಿ ನೀಡಿದ್ದರು. ಹೆರಿಗೆ ಆದ ಬಳಿಕ ಅಸ್ವಸ್ಥಗೊಂಡಿರುವ ಬಾಣಂತಿಯರು ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ ಈ ಮಗುವಿನ ಅದಲು ಬದಲು ಪ್ರಕರಣ ನಡೆದು ಹೋಗಿದೆ ಎನ್ನಲಾಗಿದೆ.
ಸಬೀನಾ ಪೋಷಕರು ಗಂಡು ಮಗು ಎಂದು ಪಟ್ಟು ಹಿಡಿದಿದ್ದರು. ಆಸ್ಪತ್ರೆಯ ವೈದ್ಯರು ಡಿಎನ್ಎ ಟೆಸ್ಟ್ಗೆ ಮುಂದಾಗಿದ್ದರು. 15 ದಿನ ವರದಿ ಬಂದ ಬಳಿಕ ನಿಮಗೆ ಮಗುವನ್ನು ಕೊಡುವುದಾಗಿ ಹೇಳಿದ್ದರು.ಬಳಿಕ ಇಬ್ಬರು ತಾಯಂದಿರಿಗೆ ವಾಸ್ತವ ಸಂಗತಿ ತಿಳಿಸಿದ್ದಾರೆ.ಇಬ್ಬರು ಬಾಣಂತಿಯರು ತಮಗೆ ಆಗಿರುವ ಮಗುವನ್ನು ಈಗ ಸ್ವೀಕರಿಸಿದ್ದಾರಂತೆ.ಕಾವ್ಯಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗುವನ್ನು ವೈದ್ಯರು ನೀಡಿದ್ದಾರೆ.ಕೊನೆಗೂ ತಾಯಂದಿರು ತಮಗೆ ಆಗಿರುವ ಮಗುವಿನ ಸತ್ಯ ಹೇಳಿದ್ದರಿಂದ ವಿವಾದಕ್ಕೆ ತೆರೆ ಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಮಾತನಾಡಿ ‘ ಸಬೀನಾಗೆ ಹೆಣ್ಣು ಮಗುವಾಗಿತ್ತು, ಕಾವ್ಯಾಗೆ ಗಂಡು ಮಗು ಜನಿಸಿತ್ತು. ಹೆರಿಗೆ ವಾರ್ಡ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಗೊಂದಲ ಸೃಷ್ಟಿಯಾಗಿದ್ದು ನಿಜ. ಗಂಡು ಮಗುವಿನ ಕೈಗೆ ತಾಯಿ ಸಬೀನಾ ಎನ್ನುವ ಟ್ಯಾಗ್ ಹಾಕಿದ್ದರು.ಬಳಿಕ ಇಬ್ಬರು ತಾಯಂದಿರು ತಮಗೆ ಆಗಿರುವ ಮಗುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಬೀನಾಗೆ ಹೆಣ್ಣು ಮಗು, ಕಾವ್ಯಾಗೆ ಗಂಡು ಮಗು ಹಸ್ತಾಂತರ ಮಾಡಿದ್ದೇವೆ ಎಂದರು.