ನ್ಯೂಸ್ ನಾಟೌಟ್ : ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳು ಮತ್ತೆ ಪುನಃಸ್ಥಾಪನೆಗೊಂಡ ನಂತರದ ಎರಡೂ ದೇಶಗಳ ಮುಖ್ಯಸ್ಥರ ನಡುವೆ ಬುಧವಾರ ನಡೆದ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಪ್ಯಾಲೆಸ್ಟೇನ್ -ಇಸ್ರೇಲ್ ಸಂಘರ್ಷದ ವಿಚಾರ ಚರ್ಚೆಗೆ ಬಂದಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನಡುವೆ ನಡೆದ ದೂರವಾಣಿ ಮಾತುಕತೆಯ ವೇಳೆ ಪ್ಯಾಲೆಸ್ಟೇನ್ ವಿರುದ್ಧ ನಡೆಯುತ್ತಿರುವ ಯುದ್ಧಾಪರಾಧಗಳು ನಿಲ್ಲಬೇಕು ಎಂದು ಸೌದಿ ರಾಜಕುಮಾರ ಒತ್ತಿ ಹೇಳಿದ್ದಾರೆಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಈಗಿನ ಸಂಘರ್ಷ ಸ್ಥಿತಿಯನ್ನು ದೂರ ಮಾಡಲು ಎಲ್ಲಾ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳೊಂದಿಗೆ ಸೌದಿ ಶ್ರಮಿಸುತ್ತಿದೆ ಎಂದು ಸೌದಿ ಯುವರಾಜ ಹೇಳಿದ್ದಾರೆಂದು ವರದಿ ತಿಳಿಸಿದೆ.
ಇಂತಹ ಸಂಘರ್ಷದ ವೇಳೆ ಜನಸಾಮಾನ್ಯರನ್ನು ಗುರಿಯಾಗಿಸುವುದನ್ನು ಸೌದಿ ಒಪ್ಪುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.ಸೌದಿ ಮತ್ತು ಇರಾನ್ ಏಳು ವರ್ಷಗಳ ಅಂತರದ ನಂತರ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ತಮ್ಮ ಸಂಬಂಧವನ್ನು ಪುನರ್ ಸ್ಥಾಪಿಸಿದ್ದವು.